ವಿಜಯಪುರ: ಒಣದ್ರಾಕ್ಷಿ ಪಡೆದು ಬ್ಯಾಂಕ್ ಖಾತೆಗೆ ಹಣ ಹಾಕುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಪ್ರಕರಣ ದ್ರಾಕ್ಷಿ ನಾಡಿನಲ್ಲಿ ನಡೆದಿದೆ. ಗುಜರಾತ್ ಮತ್ತು ರಾಜಸ್ಥಾನ ಮೂಲದ ವ್ಯಾಪಾರಿಗಳು ಇಂಥಹ ಕೃತ್ಯಗೈದು ಪರಾರಿಯಾಗಿದ್ದಾರೆ.
ವಿಜಯಪುರ ನಗರದ ವರ್ತಕರಾದ ಜಾಕೀರ್ ಹಾಜಿಲಾಲ್ ಭಾಗವಾನ್, ತೌಫೀಖ್ ಸಲೀಂ ಅಂಗಡಿ, ಅಬ್ದುಲ್ಖಾದರ ಮಹ್ಮದ್ಖಾಸೀಮ ತಹಸೀಲ್ದಾರ್ ಹಾಗೂ ಸಿದ್ದಸಿರಿ ಕೋಲ್ಡ್ ಸ್ಟೋರೇಜ್ನ ಮ್ಯಾನೇಜರ್ ಸಂತೋಷಕುಮಾರ ಸಿದ್ರಾಮ ಗುಂಜಟಗಿ ಇವರು ಮೋಸಕ್ಕೆ ಬಲಿಯಾಗಿದ್ದಾರೆ. ಇನ್ನೂ ಒಣದ್ರಾಕ್ಷಿ ಖರೀದಿಸಿ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆಂದು ಹೋದ ವ್ಯಾಪಾರಿಗಳು ಆ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ಹೀಗಾಗಿ ವ್ಯಾಪಾರಿಗಳು ಆರೋಪಿಗಳನ್ನು ಹುಡುಕಿ ಹಣ ಒದಗಿಸುವಂತೆ ಖಾಕಿ ಮೊರೆ ಹೋಗಿದ್ದಾರೆ.
ಆರೋಪಿಗಳ ವಿರುದ್ಧ ಕೇಸ್:
ಗುಜರಾತ್ ಮತ್ತು ರಾಜಸ್ಥಾನ ಮೂಲದ ಕಮಲಕುಮಾರ ಸೋಹನಲಾಲ, ಕೃನಾಲಕುಮಾರ ಮಹೇಂದ್ರಕುಮಾರ ಪಟೇಲ, ನೀಲ ದಿನೇಶ್ಬಾಯಿ ಪಟೇಲ, ರೋಣಿಕುಮ್ಮಾರ ಪಟೇಲ, ಭರತಬಾಯಿ ಜೇಟಾಬಾಯಿ ಪಟೇಲ, ಪಿಂಕೇಶ ಸುರೇಶಬಾಯಿ ಪಟೇಲ, ಸಚಿನ್, ಸುನೀಲ, ಜಯೇಶ್, ಭರತ್ ಜೇಟಾಬಾಯಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಒಣದ್ರಾಕ್ಷಿ ವಿವಿರ:
ಜಾಕೀರ್ ಹಾಜಿಲಾಲ್ ಭಾಗವಾನ್ ಎಂಬುವರಿಂದ ಒಟ್ಟು 21,59,598 ರೂ.ಮೌಲ್ಯದ 11.54 ಟನ್ ತೂಕದ ಒಣದ್ರಾಕ್ಷಿ ತುಂಬಿದ 746 ಬಾಕ್ಸ್ಗಳನ್ನು ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ. ತೌಫೀಕ್ ಅಂಗಡಿ ಇವರಿಂದ 24,29,152 ರೂ. ಮೌಲ್ಯದ 12.755 ಟನ್ ತೂಕದ ಒಣ ದ್ರಾಕ್ಷಿ, ಸಿದ್ದಸಿರಿ ಸಂಸ್ಥೆಯ ಸಿದ್ದಸಿರಿ ಕೋಲ್ಡ್ ಸ್ಟೋರೇಜ್ನಿಂದ 20,69,049 ರೂ.ಮೌಲ್ಯದ 10.423 ಟನ್ ಹಾಗೂ ಅಬ್ದುಲ್ಖಾದರ ಮಹ್ಮದ್ಖಾಸೀಮ ತಹಸೀಲ್ದಾರ್ ಇವರಿಂದ 18,91,451 ರೂ.ಮೌಲ್ಯದ 9.440 ಟನ್ ಒಣದ್ರಾಕ್ಷಿ ಖರೀದಿಸಲಾಗಿದೆ. ವಿವಿಧ ದಿನಗಳಲ್ಲಿ ಒಣದ್ರಾಕ್ಷಿ ಖರೀದಿಸಲಾಗಿದ್ದು ಒಟ್ಟು 85,49,250 ರೂ.ಪಾವತಿಸಬೇಕಿದೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.