ವಿಜಯಪುರ: ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಸರ್ಕಾರಗಳು ಯಾವುದೇ ನಷ್ಟ ಪರಿಹಾರ ನೀಡಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಮಾಡುತ್ತಿದ್ದಾರೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಷ್ಟ ಎನ್ನುವಂತಾಗಿದೆ ರೈತನ ಸ್ಥಿತಿ ಎಂದರು. ಅದಕ್ಕಾಗಿ ತಕ್ಷಣವೇ ಪರಿಹಾರ ನೀಡಬೇಕು ಎಂದರು.
ರಾಜ್ಯದ 223 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕೃಷಿ ಸಾಲ ಪಡೆದ ರೈತರು ಸಾಲದ ಹಣವನ್ನು ಬೆಳೆಗೆ ಹೂಡಿಕೆ ಮಾಡಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ ಬರಗಾಲ ಕಾರಣಗಳಿಂದ ಬೆಳೆ ನಾಶವಾಗಿದೆ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದ್ದರಿಂದ ರೈತನ ಸಂಪೂರ್ಣ ಸಾಲಮನ್ನವಾಗಬೇಕು. ಕೈಗಾರಿಕಾ ಉದ್ಯಮಿಗಳಿಗೆ, ಸಂಕಷ್ಟದ ನೆರವು ಸಾಲ ಮನ್ನಾ ತೆರಿಗೆ ಮನ್ನಾ ಮಾಡಿರುವ ರೀತಿ, ರೈತರ ಎಲ್ಲಾ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಬೆಂಗಳೂರಿನಲ್ಲಿ ರಾಜಕೀಯೆತರ ವತಿಯಿಂದ ಡಿಸೆಂಬರ್ 23ರಂದು ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.