ವಿಜಯಪುರ: ವಿವಾಹ ವಿಚ್ಛೇಧನ ಪ್ರಕರಣಕ್ಕೆ ಅರ್ಜಿ ಸಲ್ಲಿಸಿದ್ದ ಗಂಡನೋರ್ವ ಕೋರ್ಟ್ಗೆ ಬಂದಿದ್ದಾಗ ಆತನ ಪತ್ನಿಯ ಕುಟುಂಬದವರು ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಹೌದು..! ಮುದ್ದೇಬಿಹಾಳ ತಾಲ್ಲೂಕಿನ ರೂಢಗಿ ಗ್ರಾಮದ ಮಹೇಶ ಬಸಪ್ಪ ನಂದಿಹಾಳ ಕಳೆದ ಎರಡು ವರ್ಷಗಳ ಹಿಂದೆ ಗೋನಾಳ ಎಸ್.ಎಚ್.ಗ್ರಾಮದ ಬಸಪ್ಪ ಭೀಮಪ್ಪ ಬಿರಾದಾರ ಎಂಬುವರ ಮಗಳಾದ ಈರಮ್ಮ ಉರ್ಫ ಸುಮಿತ್ರಾ ಅವರೊಂದಿಗೆ ಮದುವೆ ಆಗಿದ್ದರು. ಮದುವೆ ನಂತರ ಗಂಡನ ಮನೆಗೆ ಈರಮ್ಮ ನಡೆಯಲು ಬಂದಿದ್ದರು. ಕೆಲವು ದಿನಗಳಲ್ಲೇ ತನ್ನ ಪತ್ನಿ ಈರಮ್ಮ ಉರ್ಫ ಸುಮಿತ್ರಾ ಏಳು ತಿಂಗಳ ಗರ್ಭಿಣಿ ಇರುವುದು ಗೊತ್ತಾಗಿ ಅವರ ತವರು ಮನೆಯ ಜನರಿಗೆ ಕರೆಯಿಸಿ ವಾಪಸ್ ತವರು ಮನೆಗೆ ಕಳಿಸಿದ್ದರು. ಬಳಿಕ ಮಹೇಶ ವಿವಾಹ ವಿಚ್ಛೇಧನ ಪ್ರಕರಣವನ್ನು ಮುದ್ದೇಬಿಹಾಳ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಡಿ.20 ರಂದು ಡಿವೋರ್ಸ್ ಕೇಸ್ನ ಮುದ್ದತ್ತಿಗೆ ರೂಢಗಿಯಿಂದ ಕೋರ್ಟಿಗೆ ಬಂದಿದ್ದಾಗ ಕೋರ್ಟಿನ ಮೊದಲನೇ ಗೇಟ್ನ ಮುಂಭಾಗದಲ್ಲಿ ಮುತ್ತಪ್ಪ ಬಸಪ್ಪ ಬಿರಾದಾರ, ಬಸಪ್ಪ ಭೀಮಪ್ಪ ಬಿರಾದಾರ, ಚನ್ನಮ್ಮ ಬಸಪ್ಪ ಬಿರಾದಾರ, ಈರಮ್ಮ ಉರ್ಫ ಸುಮಿತ್ರಾ ಮಹೇಶ ನಂದಿಹಾಳ ಇವರೆಲ್ಲರೂ ಒಮ್ಮೆಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹೇಶನ ಆರೋಪ ಆಗಿದೆ. ಅಲ್ಲದೇ ಕೋರ್ಟ್ ಮುಂದಿನ ಗೇಟ್ ಬಳಿ ಇದ್ದ ಲೈಟಿನ ಕಂಬಕ್ಕೆ ಕಟ್ಟಿ ಹಗ್ಗದಿಂದ ಥಳಿಸಿದ್ದಾರೆ. ಆಗ ಅಲ್ಲೇ ಇದ್ದ ಆಲಕೊಪ್ಪರದ ಶಿವನಗೌಡ ಪಾಟೀಲ್, ರೂಢಗಿಯ ಸಂಗಮೇಶ ಹಾರಿವಾಳ, ಅರ್ಜುನ ಓಲೇಕಾರ, ಪಾವಡೆಪ್ಪ ಮಾದರ ಬಂದು ನನ್ನನ್ನು ರಕ್ಷಣೆ ಮಾಡಿದರು. ಸಂಗಮೇಶ ಹಾರಿವಾಳ ಅವರು ತನ್ನನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಹಲ್ಲೆಗೈದವರ ನಾಲ್ವರು ವಿರುದ್ಧ ತನ್ನ ದೂರು ಇರುತ್ತದೆ ಎಂದು ಮಹೇಶ ನಂದಿಹಾಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.