ವಿಜಯಪುರ: ಹೇಳಿಕೆಗಳ ಮೂಲಕ ಭಯೋತ್ಪಾದನೆ ಮಾಡಬಾರದು ಎಂದು ಉಡುಪಿಯ ಪೇಜಾವರ ಮಠ ಹಾಗೂ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯರಾದ ಶ್ರೀ ಶ್ರೀ 1008 ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳರು ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಗೋಧ್ರಾ ಮಾದರಿಯ ಮರುಕಳಿಸಬಹುದು ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಕಿಡಿಕಾರಿದರು. ಈ ರೀತಿ ಹೇಳಿಕೆ ನೀಡುವವರು ಭಯೋತ್ಪಾದಕರು. ಹೇಳಿಕೆಗಳ ಮೂಲಕ ಭಯೋತ್ಪಾದನೆ ಮಾಡಬಾರದು. ಹೇಳಿಕೆ ನೀಡಿ ಭಯ ಹುಟ್ಟಿಸುತ್ತಿದ್ದಾರೆ ಎಂದರು. ಇನ್ನೂ ಇವರು ಯಾಕೆ ನೇರವಾಗಿ ಇಲಾಖೆಗಳಿಗೆ ಹೋಗಿ ಮಾಹಿತಿ ನೀಡ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡ್ತಿದ್ದಾರೆ? ಕೇಳಿದ್ರೆ ಹೇಳ್ತೀವಿ ಅನ್ನೋದು ವಿಧ್ವಂಸಕ ಕೃತ್ಯ ನಡೆಯಲಿ ಅಂದಾಗಾಯ್ತಲ್ಲ? ಇವರು ವಿಧ್ವಂಸಕ ಕೃತ್ಯ ನಡೆಸುವವರನ್ನ ರಕ್ಷಣೆ ಮಾಡ್ತಿದ್ದಾರಾ? ಎಂದು ಪೇಜಾವರ ಶ್ರೀ ಪ್ರಶ್ನಿಸಿದರು.
ಜವಾಬ್ದಾರಿ ಸ್ಥಾನದಲ್ಲಿ ಇರೋರು ಈ ರೀತಿ ಮಾತನಾಡಬಾರದು. ಈಗ ಭಯ ಹುಟ್ಟಿದೆ, ಈಗ ಭಯೋತ್ಪಾದಕರು ಯಾರು?
ಯಾರು ಹೇಳ್ತಿದ್ದಾರೊ ಅವರು ಸ್ವತಃ ಭಯೋತ್ಪಾದಕರು ಎಂದರು. ರಾಮ ಭಕ್ತರನ್ನ ಹೆದರಿಸುವ ನೆಪದಲ್ಲಿ, ಇಡೀ ದೇಶವನ್ನೆ ಹೆದರಿಸುತ್ತಿದ್ದಾರೆ. ಕೃತ್ಯ ನಡೆದರೆ ರಾಮಭಕ್ತರ ಮೇಲೆ ಅಷ್ಟೇ ಅಲ್ಲಾ, ಎಲ್ಲರ ಮೇಲೆ ಪರಿಣಾಮ ಬೀರುತ್ತದೆ.
ತಮಗೆ ಮಾಹಿತಿ ಇದ್ದರೆ ಅದನ್ನ ಬಹಿರಂಗ ಪಡೆಸಬೇಕು. ಸಂಬಂಧಪಟ್ಟವರಿಗೆ ಹೋಗಿ ಮಾಹಿತಿ ಕೊಡಬೇಕು. ಅದನ್ನ ಬಿಟ್ಟು ಹೀಗೆ ಆಗುತ್ತೆ ಎಂದು ಭಯ ಹುಟ್ಟಿಸೋದು ಅಲ್ಲ. ಇವರು ಯಾರಿಗೆ ಅನುಕೂಲ ಮಾಡಿಕೊಡ್ತಿದ್ದಾರೆ? ರಾಮಭಕ್ತರಿಗೆ ದುಷ್ಕರ್ಮಿಗಳಿಗೋ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ, ಹುಬ್ಬಳ್ಳಿ ಕರಸೇವಕ ಬಂಧನ ಪ್ರಕರಣ ಪ್ರತಿಕ್ರಿಯೆ ನೀಡಿದ ಅವರು, ತಪ್ಪು ಮಾಡಿದ್ರೆ ತಪ್ಪಿತಸ್ಥರಿದ್ದರೆ ಶಿಕ್ಷೆ ಕೊಡುವುದು ಸರಿ. ಆದ್ರೆ, ಇಂತಹ ಸಮಯ ಸಂದರ್ಭದಲ್ಲಿ ಈ ಘಟನೆ ನಡೆಯುತ್ತಿರುವಂತಹದು ಸರಿಯಲ್ಲ. ಇದು ತಪ್ಪು ಸಂದೇಶ ಕೊಡ್ತಾ ಇದೆ. ಹಾಗಾಗಿ ಈ ಬಗ್ಗೆ ಸರಕಾರ ಜಾಗೃತವಾಗಿ ಇರಬೇಕು ಎಂದು ಸಲಹೆ ನೀಡಿದರು. ಇದಕ್ಕೂ ಮೊದಲು ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಪೇಜಾವರ ಶ್ರೀಗಳು ಭೇಟಿ ನೀಡಿದರು. ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿಗಳ ಗುರು ನಮನ ಕಾರ್ಯಕ್ರಮದ ಬಳಿಕ ಆಶ್ರಮಕ್ಕೆ ಭೇಟಿ ನೀಡಿದರು. ಸಿದ್ದೇಶ್ವರ ಸ್ವಾಮೀಜಿಗಳ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ ಅವರ ಗದ್ದುಗೆ ದರ್ಶನ ಮಾಡಿದರು. ಪೇಜಾವರ ಸ್ವಾಮೀಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪಾರ್ಥಿವ ಶರೀರ ಮೆರವಣಿಗೆ ಮಾಡಿದ ಪೆಟ್ಟಿಗೆಯ ದರ್ಶನ ಪಡೆದರು. ಈ ವೇಳೆ ಶ್ರೀಗಳು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಸೇರಿದಂತೆ ಇನ್ನಿತರ ಸ್ವಾಮೀಜಿಗಳು ಸಾಥ್ ನೀಡಿದರು.