ವಿಜಯಪುರ: ಜುಲೈ 10ರಂದು ಬಕ್ರೀದ್ ಹಬ್ಬವು ಶಾಂತರೀತಿಯಿಂದ ಜರುಗುವಂತೆ ಮತ್ತು ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.
ಬಕ್ರಿದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಣಿಕೆ ತಡೆಗಟ್ಟುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜುಲೈ4ರಂದು ಸಂಜೆ ನಡೆದ ಪೂರ್ವ ಸಿದ್ಧತೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರನ್ವಯ ಗೋಹತ್ಯೆ ಮಾಡುವುದನ್ನು ನಿಷೇಧಿಸಿದೆ. ಈ ಕಾಯ್ದೆಯನ್ವಯ ಎಲ್ಲ ವಯಸ್ಸಿನ ಆಕಳು, ಆಕಳ ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಹಾಗೂ ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟಿಗಳನ್ನು ಕೂಡ ಬಕ್ರೀದ್ ಸಂದರ್ಭದಲ್ಲಿ ಹತ್ಯೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಜುಲೈ 10ರಂದು ಜರುಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ, ಅನಧೀಕೃತ ಜಾನುವಾರುಗಳ ಅಕ್ರಮ ಸಾಗಾಣಿಕೆ ಹಾಗೂ ವಧೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾ ಆಡಳಿತಕ್ಕೆ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸುವ ವ್ಯವಸ್ಥೆಯಾಗಬೇಕು. ಎಲ್ಲ ಚೆಕ್ಪೋಸ್ಟಗಳಲ್ಲಿ ಯಾವುದೇ ರೀತಿಯ ಅಕ್ರಮ ಸಾಗಾಣಿಕೆ ಆಗದಂತೆ ಕ್ರಮಕೈಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ದಾಖಲಾತಿಗಳು ಇಲ್ಲದೇ ಜಾನುವಾರುಗಳ ಸಾಗಣೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಜಾನುವಾರುಗಳ ಖರೀದಿ, ಮಾರಾಟದ ಸಂದರ್ಭದಲ್ಲಿ ಜಾನುವಾರುಗಳಿಗೆ ಕಿವಿ ಓಲೆ ಇರುವುದು ಕಡ್ಡಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪತ್ರ ಪಡೆದುಕೊಂಡೇ ಸಾಗಾಣಿಕೆ ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಅರಿತು ಕ್ರಮ ವಹಿಸಬೇಕು ಎಂದರು. ಅನಧಿಕೃತವಾಗಿ ಜಾನುವಾರುಗಳ ಸಾಗಣೆ ಮಾಡುವ ವಾಹನಗಳ ನೋಂದಣಿಯನ್ನು ರದ್ದುಪಡಿಸಲು ಇದೆ ವೇಳೆ ಜಿಲ್ಲಾಧಿಕಾರಿಗಳು ಆರ್ಟಿಓ ಅಧಿಕಾರಿಗಳಿಗೆಸೂಚಿಸಿದರು. ಅನಧಿಕೃತವಾಗಿ ಕಂಡು ಬಂದ ಜಾನುವಾರುಗಳನ್ನು ವಶಕ್ಕೆ ಪಡೆದು ಜಿಲ್ಲೆಯಲ್ಲಿರುವ ಗೋಶಾಲೆಗಳಿಗೆ ಸಾಗಿಸಲು ಕ್ರಮ ವಹಿಸಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಎಲ್ಲ ಜಾನುವಾರುಗಳ ಮಾಲೀಕರ ಮನವೊಲಿಸಿ ಜಾನುವಾರುಗಳಿಗೆ ಕಿವಿ ಓಲೆ ಹಾಕುವ ಪ್ರಕ್ರಿಯೆ ನಡೆಸಬೇಕು. ಅಕ್ರಮ ವಧೆ ಹಾಗೂ ಸಾಗಾಣಿಕೆ ತಡೆಗಟ್ಟಲು ಮಹಾನಗರ ಪಾಲಿಕೆ, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಸೇರಿ ತಂಡವೊಂದನ್ನು ರಚಿಸಿಕೊಂಡು ಕಾಯ್ದೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು.
ಅದೇ ರೀತಿ ತಾಲೂಕಾ ವ್ಯಾಪ್ತಿಯಲ್ಲಿ ಸಹ ಆಯಾ ತಹಸೀಲ್ದಾರ ಅವರ ನೇತೃತ್ವದಲ್ಲಿ ನಗರ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ, ಪಶು ಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡಂತೆ ತಂಡಗಳನ್ನು ರಚಿಸಿ, ಕಾಯ್ದೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು.
*ಸಾರ್ವಜನಿರಕರಲ್ಲಿ ಮನವಿ:* ಜಾನುವಾರು ಸಾಕಾಣಿಕೆ ಸಂಬಂಧಿಸಿದಂತೆ ಪಾಲಿಸಬೇಕಾದ ನಿಯಮಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಹೊರಡಿಸಲಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರನ್ವಯ ಗೋಹತ್ಯೆ ನಿಷೇಧಿಸಿ ಜಾರಿ ತರಲಾಗಿದೆ. ಈ ಕಾಯ್ದೆಯನ್ವಯ ಹಾಗೂ ನ್ಯಾಯಾಲಯದ ನಿರ್ದೇಶನಗಳನ್ವಯ ಬಕ್ರೀದ್ ಹಬ್ಬವನ್ನು ಆಚರಿಸಿ ಸಹಕರಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
*ಸಮಿತಿ ರಚನೆ*: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಒಂಟಿಗಳ ಹತ್ಯೆ ತಡೆಗಟ್ಟಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ನಗರಪಾಲಿಕೆಯ ಮುಖ್ಯಸ್ಥರು ಸದಸ್ಯ ಕಾರ್ಯದರ್ಶಿಗಳಾಗಿರುವಂತೆ ಈ ಹಿಂದೆ ಸಮಿತಿ ರಚಿಸಿ ಆದೇಶಿಸಿಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ನಗರ ಪಾಲಿಕೆಯ ಮುಖ್ಯಸ್ಥರು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಈ ಸಮಿತಿಯ ಮಾರ್ಗದರ್ಶನದಲ್ಲಿ ಗೋಹತ್ಯೆ ಮತ್ತು ಒಂಟಿಗಳ ಹತ್ಯೆಯನ್ನು ತಡೆಗೆ ಕ್ರಮಕೈಗೊಳ್ಳವಂತೆ ತಿಳಿಸಲಾಗಿದೆ ಎಂದು ಇದೆ ವೇಳೆ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಪ್ರಾಣೇಶ ಜಾಗೀರದಾರ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ್ ಮೆಕ್ಕಳಕಿ, ಆರ್ಟಿಓ ಅಧಿಕಾರಿಗಳಾದ ಆನಂದ್ ಪ್ರಾರ್ಥನಹಳ್ಳಿ, ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಪಾಲಿ ಕ್ಲಿನಿಕ್ ಉಪನಿರ್ದೇಶಕರಾದ ಎಸ್.ಎಸ್.ಹೊಳಿಯಪ್ಪಗೋಳ, ತಾಲೂಕು ಪಶುಪಾಲನಾ ಅಧಿಕಾರಿಗಳು ಇದ್ದರು.