ವಿಜಯಪುರ: ಮಹಿಳೆ ಮೈಮೇಲಿನ ಚಿನ್ನಾಭರಣ, ನಗದು ದರೋಡೆ ಮಾಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ವಿಜಯಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಗರದ ಅಶೋಕ ಶರಣಪ್ಪ ನಾಯ್ಕೋಡಿ ಶಿಕ್ಷೆಗೊಳಗಾದ ಆರೋಪಿ. ಸ್ವಿಪ್ಟ್ ಕಾರಿನಲ್ಲಿ ಬಂದ ಆರೋಪಿ ಆಟೋ ಏಕೆ, ಚಂದಾಬಾವಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ಯುವುದಾಗಿ ಮಹಿಳೆಗೆ ಪುಸಲಾಯಿಸಿ ಕರೆದುಕೊಂಡು ಹೋಗಿ ಚಿನ್ನಾಭರಣ ಹಾಗೂ 15 ಸಾವಿರ ನಗದು ದರೋಡೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಮಧ್ವೇಶ ಡಬೇರ ಅವರು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.