ವಿಜಯಪುರ: 2024-25 ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಘೋಷವಾಕ್ಯ ‘ಕಲಿಕಾ ಬಲವರ್ಧನೆ ವರ್ಷ’ ಇದಕ್ಕೆ ಅನುಗುಣವಾಗಿ ದ್ರಾಕ್ಷಿನಾಡಿನಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಲಾಯಿತು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ಡಾ.ಕೆ ಎಚ್ ಹಕೀಮ ಮಾರ್ಗದರ್ಶನದಲ್ಲಿ ವಿಭಿನ್ನವಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡರು. ಇನ್ನು ಶಿಕ್ಷಕರು, ಸಿಬ್ಬಂದಿಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಹೂಗುಚ್ಛ ನೀಡಿ ಅದ್ಧೂರಿಯಾಗಿ ಸ್ವಾಗತಮಾಡಿಕೊಂಡರು. ಈ ವೇಳೆ ಸರಸ್ವತಿ ಪೂಜೆಯೊಂದಿಗೆ ತರಗತಿಯನ್ನು ಪ್ರಾರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಹಕೀಮ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಪೂರಕವಾದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಆಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದರು.