ವಿಜಯಪುರ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕೈಹಿಡಿಯುವ ನಿರೀಕ್ಷೆ ಇತ್ತು, ಆದರೆ, ನರೇಂದ್ರ ಮೋದಿ ಮತ್ತು ಹಿಂದುತ್ವದ ಅಲೆಯಿಂದಾಗಿ ಗೆಲುವಿಗೆ ಬೇಕಾದಷ್ಟು ಮತಗಳು ದೊರಕಲಿಲ್ಲ. ಆದರೂ ಆರು ಲಕ್ಷಕ್ಕೂ ಅಧಿಕ ಮತಗಳು ದೊರಕಿದ್ದು ಕಳಪೆ ಏನಲ್ಲ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಎಲ್ಲ ಶಾಸಕರು ಪ್ರಾಮಾಣಿಕವಾಗಿ ಚುನಾವಣೆ ಮಾಡಿದ್ದಾರೆ. ಯಾರ ಮೇಲೂ ಆಪಾದನೆ ಮಾಡಲು ಹೋಗಿಲ್ಲ. ಎಲ್ಲರೂ ಚುನಾವಣೆ ಮಾಡಿದ್ದಾರೆ ಎಂದು ಭಾವಿಸುವೆ. ಎಲ್ಲರೂ ಒಟ್ಟಾಗಿ ಯೇ ನನಗೆ ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ ಎಲ್ಲರೂ ಚುನಾವಣೆ ಮಾಡಿದ್ದಾರೆ. ಸೋಲಿಗೆ ಹಲವು ಕಾರಣ ಇರಬಹುದು. ಆ ಬಗ್ಗೆ ಪರಮಾರ್ಶೆ ನಡೆಸಿ ಕೆಪಿಸಿಸಿಗೆ ವರದಿ ನೀಡುತ್ತೇನೆ. ಕಾಂಗ್ರೆಸ್ ಗೆ ಇನ್ನೂ 50 ಸಾವಿರ ಮತಗಳು ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಕೆಲವು ವಿಚಾರಗಳು ಸೋಲಿಗೆ ಕಾರಣವಾಗಿರಬಹುದು. ಆ ಬಗ್ಗೆ ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಒಟ್ಟಿನಲ್ಲಿ ಆರು ಲಕ್ಷಕ್ಕೂ ಅಧಿಕ ಮತ ನೀಡಿದ ಎಲ್ಲ ಮತದಾರ ಬಾಂಧವರಿಗೆ, ಕಾರ್ಯಕರ್ತರಿಗೆ, ಶಾಸಕರಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಜೊತೆಗೆ ವಿಜೇತ ಬಿಜೆಪಿ ಅಭ್ಯರ್ಥಿಗೂ ಅಭಿನಂದನೆ ಸಲ್ಲಿಸುವುದಾಗಿ ಆಲಗೂರ ತಿಳಿಸಿದರು.