ವಿಜಯಪುರ: ನಗರದ ಆರ್.ಕೆ.ಎಮ್. ಆಸ್ಪತ್ರೆಯಲ್ಲಿ ಮಹೇದ್ರಕುಮಾರ ನಾಯಕ್ ಫೌಂಡೇಶನ್” ವತಿಯಿಂದ ಜುಲೈ 20 ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಆರ್.ಕೆ.ಎಂ. ಆಸ್ಪತ್ರೆ ಮುಖ್ಯಸ್ಥ ಡಾ.ಶಂಭುಲಿಂಗ ಕರ್ಪೂರಮಠ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಈ ಬೃಹತ್ ಪ್ರಮಾಣದ ರಕ್ತದಾನ ಶಿಬಿರ ಸಂಘಟನೆಗೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್, ವಿಜಯಪುರ ಬ್ಲಡ್ ಬ್ಯಾಂಕ್, ಶಿವಗಿರಿ ಬ್ಯಾಂಕ್ ಹಾಗೂ ಶ್ರೀ ಸಿದ್ದೇಶ್ವರ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 800 ಕ್ಕೂ ಹೆಚ್ಚು ಜನರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಲಿದ್ದಾರೆ ಎಂದರು.
ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು ಸಾಕಷ್ಟಿವೆ, ರಕ್ತದಾನದಿಂದ ಮೂರು ಜೀವಗಳಿಗೂ ಉಳಿಸುವ ಪುಣ್ಯ ಪ್ರಾಪ್ತಿಯಾಗಲಿದೆ.
ಈ ಅರ್ಥಪೂರ್ಣ ಕಾರ್ಯಕ್ಕೆ ಮಹೀಂದ್ರಕುಮಾರ ನಾಯಕ್ ಅವರ ಅಭಿಮಾನಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಯಶಸ್ವಿಗೆ ಸಂಕಲ್ಪ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅರಣ್ಯ ಪ್ರಮಾಣ ಕಡಿಮೆ ಇದೆ ಹೀಗಾಗಿ ಸಸಿ ವಿತರಿಸುವ ಕಾರ್ಯಕ್ರಮ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದರು.
ಯುವಜನತೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕೋರಿದರು. ವಿಜಯಪುರ ಬ್ಲಡ್ ಬ್ಯಾಂಕ್ ಅಧ್ಯಕ್ಷ ಮಹೇಶ ಚವ್ಹಾಣ ಮಾತನಾಡಿ, ಪ್ರತಿದಿನ ನೂರು ಜನರು ರಕ್ತದಾನ ಮಾಡಿದರೆ ಮಾತ್ರ ವಿಜಯಪುರ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ, ಕೊರತೆ ಎದುರಾದರೆ ನೆರೆಯ ರಾಜ್ಯಗಳಿಂದ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಹೀಗಾಗಿ ಉತ್ತಮ ಆರೋಗ್ಯ, ಜೀವ ಉಳಿಸುವ ಪುಣ್ಯಕ್ಕಾಗಿ ಯುವಜನತೆ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಸುನೀಲ ಚವ್ಹಾಣ ಮಾತನಾಡಿ, ಜಿಲ್ಲೆಯಲಿ ೮ ಬ್ಲಡ್ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ೩೦ ಸಾವಿರ ಯೂನಿಟ್ ರಕ್ತದ ಬೇಡಿಕೆ ಇದೆ, ಆದರೆ ಪ್ರಸ್ತುತ ಪೂರೈಕೆ ಆಗುತ್ತಿರುವ ಪ್ರಮಾಣ ೧೮ ಸಾವಿರ ಯೂನಿಟ್ ಮಾತ್ರ ಲಭ್ಯವಾಗುತ್ತಿದೆ ಎಂದರು. ರಕ್ತ ಸಂಗ್ರಹಣೆಯಲ್ಲಿ ವೈಜ್ಞಾನಿಕ ವಿಧಾನ ಅನೇಕ ಕಡೆಗಳಲ್ಲಿ ಅನುಸರಿಸುತ್ತಿಲ್ಲ. ಈ ರೀತಿಯ ವಿಧಾನಗಳಿಗೆ ಕಡಿವಾಣ ಹಾಕಬೇಕು, ಸಾರ್ವಜನಿಕರ ಸುಲಿಗೆ ತಪ್ಪಿಸಬೇಕು ಎಂದರು. ಮಹೇಂದ್ರ ನಾಯಕ ಫೌಂಡೇಶನ್ ಅಧ್ಯಕ್ಷ ದೇವಾನಂದ ಪೂಜಾರಿ, ಕಾರ್ಯದರ್ಶಿ ಚೇತನ ಮಠ, ವಿಕಾಸ ಮಲ್ಲಾಡಿ, ಅನೀಲ್ ಸಾಳುಂಕೆ, ಅಮೀತ್ ಯಳಮೇಲಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.