ವಿಜಯಪುರ: ಭಟ್ಕಳನಲ್ಲಿ ಭಯೋತ್ಪಾದನೆ ಜೀವಂತ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಕೆರೂರ ಗಲಾಟೆ ಪ್ರಕರಣದಲ್ಲಿ ವಿಜಯಪುರದ ದರ್ಗಾ ಜೈಲಿಗೆ ಶಿಫ್ಟ್ ಆಗಿರುವ ಹಿಂದು ಮುಖಂಡರ ಭೇಟಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗಮಿಸಿದ ವೇಳೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಬುರಕಾದಲ್ಲಿ ಚಾಕು ಹಿಡಿದುಕೊಂಡು ಹಲ್ಲೆ ಮಾಡಿದ್ದು ಖಂಡನೀಯ. ಅಲ್ಲದೇ, ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ನಡೆಯೋದಿಲ್ಲ. ಹಿಂದೂ ಸಮಾಜ ಜಾಗೃತಿಯಾಗಿದೆ.
ಗಲಭೆ, ಕೊಲೆ, ಹಿಂದೂಗಳನ್ನ ಕೆಣಕೋದು ಇನ್ನು ನಡೆಯೊಲ್ಲ. ಇದಕ್ಕೆ ಹಿಂದೂ ಸಮಾಜ ಉತ್ತರ ಕೊಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ನಗರದ ದರ್ಗಾ ಜೈಲಿನಲ್ಲಿ ಹಿಂದು ಮುಖಂಡರ ಭೇಟಿಗೆ ಆಗಮಿಸಿದ ವೇಳೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ನಮ್ಮಂಥ ಹೋರಾಟಗಾರರಿಗೆ ರಾಜಕೀಯದಲ್ಲಿ ಅವಕಾಶ ಇಲ್ಲ.
ಹಿಂದುತ್ವವಾದಿಗಳಿಗೆ ಸದ್ಯದ ರಾಜಕೀಯದಲ್ಲಿ ಅವಕಾಶ ಇಲ್ಲ. ಕಳ್ಳರು, ಭ್ರಷ್ಟರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಇದೆ. ಹೀಗಾಗಿ ನಿಶ್ಚಿತವಾಗಿ ಚುನಾವಣೆಗೆ ನಿಲ್ಲಲ್ಲ ಎಂದರು. ಎಸ್ಡಿಪಿಐ-ಪಿಎಫ್ಐ ಬಿಜೆಪಿಯ ಬಿ ಟೀಮ್. ಎಸ್ಡಿಪಿಐ ಮತ್ತು ಪಿಎಫ್ಐ ಬಿಜೆಪಿಯ ಬಿ ಟೀಂ ಎಂಬ ವಿರೋಧ ಪಕ್ಷಗಳ ಆರೋಪ ನೂರಕ್ಕೆ ನೂರು ಸತ್ಯ ಆಗಿದೆ. ಬಿಜೆಪಿಗೆ ದೇಶದ ಮತ್ತು ಹಿಂದೂ ಕಾರ್ಯಕರ್ತರ ಸುರಕ್ಷತೆ ಬೇಕಿಲ್ಲ. ಅಧಿಕಾರವೊಂದೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಪಿಎಫ್ಐ, ಎಸ್ಡಿಪಿಐ ಇದೊಂದು ಕ್ಯಾನ್ಸ್ರ್ ಇದ್ದ ಹಾಗೆ. ಇಂಥ ಸಂಘಟನೆ ಬ್ಯಾನ್ ಬಗ್ಗೆ ಬಿಜೆಪಿಯವರು ಮಾತಾಡಲ್ಲ.
ಮುಂದಿನ ತಿಂಗಳಿಂದ ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಲು ಹೋರಾಟ ನಡೆಸಲಾಗುವುದು ಎಂದರು.