ವಿಜಯಪುರ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನ್ನು ಇಡಿ ವಿಚಾರಣೆ ಮಾಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ದ್ವೇಷದ ರಾಜಕಾರಣದಲ್ಲಿಯೇ ಬಿಜೆಪಿ ಮುಳುಗಿದೆ, ಸಂವಿಧಾನಿಕ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವಲ್ಲಿ ನಿರತವಾಗಿದೆ, ದ್ವೇಷದ ರಾಜಕಾರಣವೇ ಬಿಜೆಪಿ ಧ್ಯೇಯ ಎಂದು ಆರೋಪಿಸಿದರು.
ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಮೇಲೆ ಅಧಿಕಾರ ದುರುಪಯೋಗ ಮಾಡಿಕೊಂಡು ಮುಗಿದು ಹೋದ ನ್ಯಾಷನಲ್ ಹೆರಾಲ್ಸ್ ಪತ್ರಿಕೆಯ ಆಂತರಿಕ ವಿಚಾರವನ್ನು ಮತ್ತೆ ಕೆದಕಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ವಿಚಾರಣೆಗೊಳಪಡಿಸುತ್ತಿರುವುದು ಖಂಡನಾರ್ಹ. ವಿರೋಧ ಪಕ್ಷದವರ ಮೇಲೆ ಇಂತಹ ಮನೋಬಲ ಕುಗ್ಗಿಸುವಂತಹ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷವು ಸಹಿಸುವುದಿಲ್ಲ. ಕೇಂದ್ರ ಸರಕಾರವು ಏನೇ ಪ್ರಯತ್ನಪಟ್ಟರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಡೀ ದೇಶದ ತುಂಬಾ ನಮ್ಮ ಕಾಂಗ್ರೆಸ್ ಪಕ್ಷದ ನಾಯಕಿಯಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿಯವರ ಪರವಾಗಿ ಪಕ್ಷದ ಕಾರ್ಯಕರ್ತರು ನಿಲ್ಲುತ್ತಾರೆ ಎಂದರು. ಡಿಸಿಸಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಕೇವಲ ದ್ವೇಷದ ರಾಜಕಾರಣ ಮಾಡುತ್ತಿದೆ. ಎ.ಐ.ಸಿ.ಸಿ. ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಾಂವಿಧಾನಿಕ ಸಂಸ್ಥೆಯಾದ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಂಡು ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು. ಮಾಜಿ ಶಾಸಕ ವಿಠ್ಠಲ ವಿಠ್ಠಲ ಕಟಕಧೋಂಡ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ಹಮೀದ ಮುಶ್ರೀಫ್, ಬಿ.ಎಸ್. ಪಾಟೀಲ ಯಾಳಗಿ, ಕಾಂತಾ ನಾಯಕ, ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ಸುಭಾಷ ಛಾಯಾಗೋಳ, ಮಹ್ಮದರಫೀಕ್ ಟಪಾಲ, ಚಾಂದಸಾಬ ಗಡಗಲಾವ, ಎಸ್.ಎಂ. ಪಾಟೀಲ ಗಣಿಹಾರ, ವಿದ್ಯಾರಾಣಿ ತುಂಗಳ, ಡಾ.ವಿಶ್ವನಾಥ ಮಠ, ಸಂಗನಗೌಡ ಪಾಟೀಲ ಹರನಾಳ, ಆನಂದ ದೊಡಮನಿ, ರಾಮನಗೌಡ ಬಗಲಿ, ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ ಇದ್ದರು.