ವಿಜಯಪುರ: ಮಹಿಳೆಯರ ಬಗ್ಗೆ ಅಗೌರವ ತೋರುವ ಹೇಳಿಕೆ ನೀಡಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗಾಂಧೀವೃತ್ತದ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರ ದಹಿಸಿ ಹಾಗೂ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಜವಾಬ್ದಾರಿಯುತ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಮಹಿಳೆಯರ ಬಗ್ಗೆ ಅಗೌರವ ತೋರುವ ಹೇಳಿಕೆ ನೀಡಿರುವುದು ಖಂಡನೀಯ, ಇದು ಅವರ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ, ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ, ಸಹೋದರಿಯಾಗಿ, ತಾಯಿಯಾಗಿ ಮಹಿಳೆ ನಿಭಾಯಿಸುವ ಪಾತ್ರ ಅಷ್ಟಿಷ್ಟಲ್ಲ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿ ಸಮಸ್ತ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ದೂರಿದರು. ಸ್ತ್ರೀಕುಲಕ್ಕೆ ಅಪಮಾನ ಮಾಡಿರುವ ಪ್ರಿಯಾಂಕ್ ಖರ್ಗೆ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕೂಡಲೇ ಪ್ರಿಯಾಂಕ್ ಖರ್ಗೆ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವಿಜಯಲಕ್ಷ್ಮೀ ಹಮಿತಖಾನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತಿ ಭುಯ್ಯಾರ, ಗಾಯತ್ರಿ ಬೇವೂರ, ಸುಜಾತಾ ಮಾಳಳ್ಳಿ, ಪಾರ್ವತಿ ಸ್ಥಾವರಮಠ, ವಿಜಯಲಕ್ಷ್ಮೀ ರೂಗಿಮಠ, ಸುವರ್ಣಾ ಕುರ್ಲೆ, ಅನುಸೂಯಾ ಮದರಿ, ಸುಷ್ಮಿತಾ, ಶಾಂತಾ, ಬೋರಮ್ಮ, ರಾಜೇಶ್ವರಿ, ಭಾರತಿ, ಗೌರಮ್ಮ ಪಾಲ್ಗೊಂಡಿದ್ದರು