ಹುಬ್ಬಳ್ಳಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಂಗಳಳ್ಳಿ ಗ್ರಾಮದ ಬಳಿ ಬೆಣ್ಣೆಹಳ್ಳ ಬಂದ ಪರಿಣಾಮ ಜಮೀನು ಮಾಲೀಕ ಸೇರಿ 28 ಕೂಲಿ ಕಾರ್ಮಿಕರು ಹಳ್ಳದಲ್ಲಿ ಸಿಲುಕಿದ್ದ ಘಟನೆ ತಿಳಿಯುತ್ತಿದ್ದ ತಕ್ಷಣವೇ ತಾಲೂಕು ಆಡಳಿತಕ್ಕೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸೂಚನೆ ನೀಡಿ, ಕೆಲವೇ ಸಮಯದಲ್ಲಿ ಎಲ್ಲರನ್ನೂ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಹಶೀಲ್ದಾರ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಲಿ ಕಾರ್ಮಿಕರನ್ನ ಬೋಟ್ ಮೂಲಕ ರಕ್ಷಣೆ ಮಾಡಿ ಹೊರ ತಂದರು.
ಈ ಸಮಯದಲ್ಲಿ ಸ್ಥಳದಲ್ಲಿ ಕ್ಷೇತ್ರದ ಶಾಸಕರು ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಸಿಬ್ಬಂದಿಗಳ ಕಾರ್ಯವನ್ನ ಶ್ಲಾಘಿಸಿದರು.
ಈ ಸಮಯದಲ್ಲಿ ಮಾತನಾಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಈ ಭಾಗದಲ್ಲಿ ಹಿಂದೆಯೂ ಇಂತಹ ಘಟನೆಗಳು ಆಗಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಬೇರೆ ಕಡೆ ಮಳೆಯಾದರೇ ಈ ಭಾಗದ ರೈತ ಬಂಧುಗಳು ಜಾಗೃತೆ ವಹಿಸಬೇಕು ಎಂದು ಹೇಳಿದರು.
ಇಂದು ಸಮಯ ಬಹಳ ಒಳ್ಳೆಯದಿದೆ. ಬೇಗನೇ ಕಾರ್ಯಾಚರಣೆ ಮುಗಿದು, ಎಲ್ಲರೂ ಕ್ಷೇಮದಿಂದ ಹೊರಗೆ ಬಂದಿದ್ದಾರೆ. ರಾತ್ರಿಯಾಗಿದ್ದರೇ ಬಹಳ ತೊಂದರೆಯಾಗುತ್ತಿತ್ತು. ಈ ಕಾರ್ಯಾಚರಣೆಗೆ ಇಂಗಳಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಹಲವರು ಸಾಥ್ ನೀಡಿರುವುದನ್ನ ಸಚಿವರು ಸ್ಮರಿಸಿಕೊಂಡರು.
ಬ್ಯಾಹಟ್ಟಿ ಗ್ರಾಮದ ಯುವಕನೋರ್ವ ಕೊಚ್ಚಿಕೊಂಡು ಹೋಗಿದ್ದು, ಆತನಿಗಾಗಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈಗಾಗಲೇ ಈ ಭಾಗದಲ್ಲಿ ಎರಡು ಸೇತುವೆ ಮಾಡಿದ ನಂತರವೂ ತೊಂದರೆಯಾಗಿದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದೆಂದು ಸಚಿವರು ಹೇಳಿದರು.