ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ.
ಹಲವು ವರ್ಷಗಳಿಂದ ಮನೆಯೊಂದು ಮೂರು ಬಾಗಿಲು ಆಗಿರುವ ಜಿಲ್ಲಾ ಬಿಜೆಪಿ ಘಟಕ ಚುನಾವಣೆಯಲ್ಲಾದರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ವಿಜಯಪುರ ನಗರದ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಬಿಜೆಪಿಯ ರಾಜಕೀಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಕರೆ ತರುವ ಸಾಹಸವನ್ನು ಮಾಡಿದೆ. ಸದ್ಯಕ್ಕೆ ಇದು ಫಲಪ್ರದವಾಗಿದೆ. ಆದರೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಇನ್ನೂ ಸಮಯವಿರುವ ಕಾರಣ ಟಿಕೇಟ್ ಹಂಚಿಕೆಯಲ್ಲಿ ತಕ್ಕಡಿ ಸ್ವಲ್ಪ ಏರುಪೇರಾದರೂ ಸಹ ಮತ್ತೆ ಬಿಜೆಪಿ ಜಿಲ್ಲಾ ಘಟಕ ಅದೇ ರಾಗ ಅದೇ ಹಾಡಿಗೆ ಮರಳಿದರೆ ಅಚ್ಚರಿ ಪಡಬೇಕಿಲ್ಲ.
ವರ್ಷದ ನಂತರ ಒಂದೇ ವೇದಿಕೆಯಲ್ಲಿ ಗುರು-ಶಿಷ್ಯರು:
ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಭಿನ್ನಮತ ಇರುವದು ಗುಟ್ಟಾಗಿ ಏನು ಉಳಿದಿಲ್ಲ. ನಗರ ಶಾಸಕ ಬಸನಗೌಡ ಪಾಟೀಲ ಯತ್ಬಾಳ ಹಾಗೂ ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿಯ ರಾಜಕೀಯ ಭಿನ್ನಮತ ಬಿಜೆಪಿ ಜಿಲ್ಲಾಧ್ಯಕ್ಷರ ಕೈ ಕಟ್ಟಿ ಹಾಕಿದೆ. ಬಿಜೆಪಿಯಲ್ಲಿ ಹಾಲಿ ಶಾಸಕರ ಬಣ, ಮಾಜಿ ಶಾಸಕರ ಬಣ ಒಂದಡೇ ಇದ್ದರೆ, ಜಿಲ್ಲಾಧ್ಯಕ್ಷರು ಇವರ ನಡುವಿನ ಇನ್ನೊಂದು ಬಣವಾಗಿ ಉಳಿದು ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಗುರು- ಶಿಷ್ಯರಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಾಲಿ ಹಾಗೂ ಮಾಜಿ ಶಾಸಕರು ಸದ್ಯ ತಮ್ನದೇ ಬಣಗಳನ್ನು ಸೃಷ್ಟಿಸಿ ಕೊಂಡಿದ್ದಾರೆ.
ಇದೇ ಕಾರಣಕ್ಜೆ ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಟಿಕೇಟ್ ಹಂಚಿಕೆ ಮಾಡುವದು ಜಿಲ್ಲಾಧ್ಯಕ್ಷರಿಗೆ ತಲೆನೋವಾಗಿದೆ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ಘಟಕ ತಮ್ಮ ಮುಖಂಡರೊಬ್ಬರಿಗೆ ಈ ಜವಾಬ್ದಾರಿ ಹೊರೆಸಿದ್ದಾರೆ. ಅವರು ಮೂರು ಬಾಗಿಲು ಸೇರಿಸಿ ಒಂದೇ ಬಾಗಿಲು ತೆರೆಯಲು ಸಭೆ ಮೇಲೆ ಸಭೆ ನಡೆಸಿದ್ದಾರೆ.
ಅರ್ಜಿ ಯಾರಿಗೆ ಸಲ್ಲಿಸಲಿ: ನಾಮಪತ್ರ ಸಲ್ಲಿಕೆ ಆರಂಭಗೊಳ್ಳುವ ಮುನ್ನ ಟಿಕೇಟ್ ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಬೇಕಾಗಿತ್ತು. ಆಗ ಅವರ ಎದುರು ಮೂರು ಬಾಗಿಲು ತೆರೆದುಕೊಂಡ ಕಾರಣ ಯಾರಿಗೆ ಸಲ್ಲಿಸಿದರೆ ತಮಗೆ ಟಿಕೇಟ್ ದೊರೆಯಬಹುದು ಎನ್ನುವ ಗೊಂದಲ ಅವರಲ್ಲಿ ಉಂಟಾಗಿತ್ತು. ಗೌಡರ ಹಿಂಬಾಲಕರು ಗೌಡರಿಗೆ ಸಲ್ಲಿಸಿದ್ದರೆ, ಶೆಟ್ಟರ್ ಹಿಂಬಾಲಕರು ಶೆಟ್ಟರ್ ಅವರಿಗೆ, ಇನ್ನೂ ತಟಸ್ಥ ಇರುವ ಆಕಾಂಕ್ಷಿ ಅಭ್ಯರ್ಥಿಗಳು ಜಿಲ್ಲಾ ಘಟಕಕ್ಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಆಕಾಂಕ್ಷಿಗಳು ಟಿಕೇಟ್ ಪಡೆಯಬೇಕಾದರೆ ಎಲ್ಲ ನಾಯಕರಿಗೂ ಜೀ ಹುಜೂರ್ ಅನ್ನಬೇಕಾಗಿದೆ.
ಸಭೆಯಲ್ಲಿ ಕುಳಿತರು ಪರಸ್ಪರ ಟೀಕಿಸಲಿಲ್ಲ: ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ನಿನ್ನೆ ನಡೆದ ಸಭೆಯಲ್ಲಿ ವೇದಿಕೆಯಲ್ಲಿದ್ದರೂ ಅವರ ಭಾಷಣದಲ್ಲಿ ಅಪರೋಕ್ಷ ಇಲ್ಕ ನೇರವಾಗಿ ಯಾವುದೇ ಟೀಕೆ ಮಾಡಲಿಲ್ಲ, ಕೇವಲ ಜಿಲ್ಲಾ ಘಟಕ ಕರೆದ ಸಭೆಯ ಉದ್ದೇಶದ ಬಗ್ಗೆ ಮಾತನಾಡಿದರು ಎಂದು ಬಿಜೆಪಿಯ ಹಿರಿಯ ಮುಖಂಡ ರೊಬ್ಬರು ಮಾಹಿತಿ ಹಂಚಿ ಕೊಂಡಿದ್ದಾರೆ.
ಈ ಸಭೆಯ ಮುಖ್ಯ ಉದ್ದೇಶ ಟಿಕೇಟ್ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ತಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನ ನಡೆಯಿತು ಎನ್ನಲಾಗಿದೆ.
ಇನ್ನೂ. ಅ. 17ರವರೆಗೆ ನಾಮಪತ್ರ ಸಲ್ಲಿಸುವ ಅವಕಾಶ ಇರುವ ಕಾರಣ ಪಕ್ಷದಲ್ಲಿ ನಡೆಯುವ ಬೆಳವಣಿಗೆಯನ್ನು ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸುತ್ತಿರುವದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.