ವಿಜಯಪುರ: ವಿಜಯಪುರದ ವಿಜಯ ಪತಾಕೆ ಕರ್ನಾಟಕದಲ್ಲಿ ಮುಂದೆ 150ಕ್ಕೂ ಅಧಿಕ ಸ್ಥಾನ ಗಳಿಸಿಕೊಡುವ ವಿಶ್ವಾಸ ಮೂಡಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಎಂಐಎಂ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅವರಿಂದ ಯಾರಿಗೆ ಲಾಭ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅಲ್ಲದೇ, ಶಾಸಕ ಎಂ.ಬಿ. ಪಾಟೀಲ ನಾನು ಆರು ತಿಂಗಳು ಮಾತಾಡಿಲ್ಲ. ಅವರು ರಾಜ್ಯ ನಾಯಕರು. ನಾನೊಬ್ಬ ಶಾಸಕ. ನಮ್ಮ ಪಕ್ಷದಲ್ಲಿ ಪ್ರಾಮಾಣಿಕ ಚುನಾವಣೆ ಆಗಿದೆ. ಕಾಂಗ್ರೆಸ್ ನಲ್ಲಿಯೇ ವಿಭಿನ್ನ ರೀತಿ ಆಗಿದೆ ಎಂದರು.
ಇನ್ನು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರ ಶಾಸಕ ಯತ್ನಾಳರ ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ಸಾಧನೆ ಕಂಡ ಮತದಾರ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಮೊದಲ ಬಾರಿ ಇಷ್ಟು ಸ್ಥಾನಗಳು ಬಂದಿರುವುದು ನಗರ ಶಾಸಕರ ಪ್ರಯತ್ನ ಹಾಗೂ ಹಿಂದುತ್ವವೇ ಕಾರಣ ಆಗಿದೆ. ಅಲ್ಲದೇ, ಕಾರ್ಯಕರ್ತರು, ಮುಖಂಡರ ಸೇವೆ ಕೂಡ ಮಹತ್ವದಾಗಿದೆ ಎಂದರು.
ಈ ವೇಳೆಯಲ್ಲಿ ಕುಡಚಿ ಶಾಸಕ ಪಿ.ರಾಜೀವ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ್, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.