ವಿಜಯಪುರ: ಹಿಂದುತ್ವ ತಿಳಿಯಲು ಗೂಗಲ್ ನೋಡಬೇಡಿ, ಧ್ಯಾನದಿಂದ ಅಧ್ಯಯನ ಮಾಡಿ ಎಂದು ಶಾಸಕ ಸತೀಶ ಜಾರಕಿಹೊಳಿಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದ ಎದುರು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪದೇ ಪದೇ ಹಿಂದುತ್ವದ ಬಗ್ಗೆ ಯಾಕೆ ಅಪಮಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿದ್ದು, ಇದೀಗ ಸತೀಶ ಜಾರಕಿಹೊಳಿ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತಾಗಿದೆ ಎಂದರು.
ಹಿಂದೂ ಎಂಬುದು ನಮ್ಮ ಸಂಸ್ಕೃತಿ. ಅದರ ಬಗ್ಗೆ ನಮಗೆ ಗರ್ವ ಇದೆ. ಇಡೀ ದೇಶವಾಸಿಗಳ ಗರ್ವವಾಗಿದೆ. ಕಾಂಗ್ರೆಸ್ ನಾಯಕರು ಪದೇ ಪದೇ ಹಿಂದುತ್ವದ ಬಗ್ಗೆ ಯಾಕೆ ಅಪಮಾನ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. ರಾಹುಲ್ ಗಾಂಧಿ ಸಹ ಈ ಭಾಗಕ್ಕೆ ಬಂದು ಹೋದರು. ರಾಹುಲ್ ಗಾಂಧಿ ಹಿಂದು, ಹಿಂದುತ್ವವಾದಿ ವಿಚಾರದಲ್ಲಿ ಬೇರೆ ಬೇರೆ ವ್ಯಾಖ್ಯಾನ ನೀಡುತ್ತಾರೆ. ಬಸವಣ್ಣನವರ ವಚನಗಳನ್ನೂ ಅಧ್ಯಯನ ಮಾಡಬೇಕು. ಅದನ್ನು ಬಿಟ್ಟು ನಿಂದನೆ ಮಾಡುವುದು ಸರಿಯಲ್ಲ ಎಂದರು.