ವಿಜಯಪುರ: ಹಣಕಾಸಿನ ಅಡಚಣೆ ಹಿನ್ನೆಲೆ ಸಾಲ ತೆಗೆದುಕೊಳ್ಳಲು ಹೋದ ವ್ಯಕ್ತಿಯ ದಾಖಲೆ ಪಡೆದು ಆತನಿಗೆ ಗೊತ್ತಿಲ್ಲದಂತೆ 11 ಲಕ್ಷ ಸಾಲ ಪಡೆದು ಮೋಸಗೈದಿರುವ ಘಟನೆ ವಿಜಯಪುರ ನಗರದ ಬಸವೇಶ್ವರ ಸರ್ಕಲ್ ಬಳಿ ತಡವಾಗಿ ಬೆಳಕಿಗೆ ಬಂದಿದೆ.
ಬಸವೇಶ್ವರ ವೃತ್ತದಲ್ಲಿರುವ ವಿಡಿಸಿಸಿ ಬ್ಯಾಂಕ್ನಲ್ಲಿ ಮಠಪತಿ ಗಲ್ಲಿಯ ನಿವಾಸಿ ಅರವಿಂದ ಕಾಳೆ ಎಂಬಾತ ವಂಚನೆಗೆ ಒಳಗಾಗಿದ್ದಾನೆ. ಈತನ ಹೆಸರಲ್ಲಿ ಖಾತೆ ತೆರೆದು 11 ಲಕ್ಷ ಸಾಲ ತೆಗೆದಿದ್ದು, ಬ್ಯಾಂಕ್ನಿಂದ ನೋಟಿಸ್ ಬಂದಾಗಲೇ ವಂಚನೆ ಅರಿವಾಗಿದೆ.
*ಘಟನೆ ವಿವರ*
ವಿಜಯಪುರ ನಗರದ ದಿವಟೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಎಂಬಾತ ಕಾಳೆಗೆ ಪರಿಚಯವಾಗಿದ್ದು, ಸಾಲ ಕೊಡಿಸುವುದಾಗಿ ಹೇಳಿ ಅರವಿಂದನ ಆಧಾರ್ ಕಾರ್ಡ್, ಫೋಟೊ ಹಾಗೂ ಮನೆ ಉತಾರೆ ಪಡೆದುಕೊಂಡು ಸಾಲ ಮಂಜೂರಿ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿ ಮೋಸ ಮಾಡಿದ್ದಾನೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.