ವಿಜಯಪುರ: ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ವಿಜಯಪುರದ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದ ಈರಪ್ಪ ನಾಗಪ್ಪ ಮಡಿವಾಳರ ಶಿಕ್ಷೆಗೊಳಗಾದವ. ಅಪ್ರಾಪ್ತೆ ತಮ್ಮ ಮನೆಯ ಎದುರು ಆಟವಾಡುವಾಗ ಪುಸಲಾಯಿಸಿ ಚಾಕಲೇಟ್ ಕೊಡಿಸುವ ನೆಪದಲ್ಲಿ ಪಕ್ಕದ ಜಮೀನಿನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾನೆ. ಬಳಿಕ ಈ ವಿಷಯ ಮನೆಯಲ್ಲಿ ತಿಳಿದು ತಕ್ಷಣವೇ ದೂರು ದಾಖಲು ಮಾಡಿದ್ದಾರೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತಾಳಿಕೋಟೆ ಠಾಣೆ ಪೊಲೀಸರು, ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ರಾಮ ನಾಯಕ ಅವರು, ಪ್ರಕರಣದಲ್ಲಿಯ ಸಾಕ್ಷ್ಯಾಧಾರಗಳು ರುಜುವಾತಾಗಿವೆ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ. ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವಿ.ಜಿ. ಹಗರಗುಂಡ ಸರಕಾರದ ಪರವಾಗಿ ವಾದ ಮಂಡಿಸಿದ್ದರು.