ವಿಜಯಪುರ: ಬಸವನಾಡು ಖ್ಯಾತಿಯ ವಿಜಯಪುರದಲ್ಲಿ ಎರಡು ದಿನ ಅಕ್ಷರ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ್ ಹೇಳಿದರು. ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 23ರಂದು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಆಗಲಿದೆ ಎಂದರು. ನಡೆದಾಡುವ ದೇವರು ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರಧಾನ ವೇದಿಕೆ ಅಡಿಯಲ್ಲಿ ಸಮ್ಮೇಳನ ನಡೆಯಲಿದೆ. ಮಾರ್ಚ್ 23ಕ್ಕೆ ಬಾಗಲಕೋಟ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್ಜಿ ಕರೂರ ಉದ್ಘಾಟಿಸುವರು ಎಂದರು.
ಸಮ್ಮೇಳನಾಧ್ಯಕ್ಷರಾಗಿ ಡಾ. ಸಿದ್ದಣ್ಣ ಉತ್ನಾಳ ಆಯ್ಕೆಯಾಗಿದ್ದಾರೆ. ಅಂದು ಸಾಹಿತ್ಯ, ಪತ್ರಿಕೋದ್ಯಮ ಗೋಷ್ಠಿ ನಡೆಯಲಿದ್ದು, ಕೃಷಿ ಗೋಷ್ಠಿ, ಕವಿ ಗೋಷ್ಠಿ, ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 24ರಂದು ಕನ್ನಡ ನಾಡು ನುಡಿಯ ಅಸ್ಮಿತೆ, ಮಕ್ಕಳ ಪ್ರತಿಭೆ ಮತ್ತು ಕಲರವ, ಮಹಿಳಾ ಸಬಲೀಕರಣ ಮತ್ತು ಸುರಕ್ಷತೆ, ಜಾನಪದ ಚಿಂತನಗೋಷ್ಠಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರಿಗೆ ಸನ್ಮಾನ ಗೌರವ ನಡೆಯಲಿದೆ ಎಂದರು. ಅಕ್ಷರ ಜಾತ್ರೆಯಲ್ಲಿ ಶಾಸಕರು, ಸಂಸದರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತರುತ್ತಾರೆ ಎಂದರು.