ವಿಜಯಪುರ: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆಲಮಟ್ಟಿಯ ಹಳೆಯ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಗುರುವಂದನ ಆಯೋಜಿಸುವ ಮೂಲಕ ಮಾದರಿ ಕೆಲಸ ಮಾಡುತ್ತಿದ್ದಾರೆ. ಇಂಥ ಕಾರ್ಯಗಳು ಸರಕಾರಿ ಶಾಲೆಗೆ ಉತ್ತೇಜನ ನೀಡುತ್ತವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ (ಎಂ.ಪಿ.ಎಸ್.) ೧೯೯೧ನೇ ಸಾಲಿನ ಏಳನೆಯ ತರಗತಿ ಹಾಗೂ ಮಂಜಪ್ಪ ಹರ್ಡೇಕರ್ ಸ್ಮಾರಕ (ಎಂ.ಹೆಚ್.ಎಂ) ಪ್ರೌಢಶಾಲೆಯಲ್ಲಿ ೧೯೯೪ನೇ ಸಾಲಿನ ಹತ್ತನೆಯ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ರವಿವಾರ ಆಯೋಜಿಸಿದ ಗುರುವಂದನ ಕಾರ್ಯಕ್ರಮಕ್ಕೆ ವಿಡಿಯೊ ಮೂಲಕ ಉದ್ಘಾಟನೆ ನುಡಿ ಹೇಳುತ್ತ ಸದರಿ ಶಾಲೆಗೆ ಶೀಘ್ರದಲ್ಲಿ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.
ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣಾ ತೀರ ಮುಳುಗಡೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಚಾಲಕರಾದ ಜಿ.ಸಿ. ಮುತ್ತಲದಿನ್ನಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟು ಮುಳುಗಡೆ ಸಂತ್ರಸ್ಥರ ಪೈಕಿ ಶೇಕಡಾ ಎರಡರಷ್ಟು ಜನ ಮಾತ್ರ ಪರಿಹಾರದ ಸದುಪಯೋಗ ಪಡೆದಿದ್ದಾರೆ. ಬಹುತೇಕ ಜನ ತಮ್ಮ ಮುಗ್ಧತೆ ಹಾಗೂ ನಿರ್ಲಕ್ಷ್ಯದಿಂದ ಮುಂಬರುವ ದಿನಗಳಲ್ಲಿ ಕೊಯಿನಾ ಆಣೆಕಟ್ಟು ಸಂತ್ರಸ್ತರಂತೆ ಭಿಕ್ಷೆ ಬೇಡುವ ಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೃಷ್ಣಾ ಮುಳುಗಡೆಯ ಸಂತ್ರಸ್ಥರು ಪರಿಹಾರಕ್ಕಾಗಿ ಸದಾ ಹೋರಾಟ ಮಾಡುತ್ತಲೇ ಬಂದಿದ್ದಾರೆ, ಪ್ರತಿಯೊಂದು ಸೌಲಭ್ಯವನ್ನು ಹೋರಾಟ ಮಾಡಿಯೇ ಪಡೆಯಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯೋಜನೆಯ ಸಾಮಾಜಿಕ ಪರಿಣಾಮಗಳ ಬಗ್ಗೆ ಮಾತನಾಡುತ್ತ, ಮುಳುಗಡೆಯಿಂದಾಗಿ ಗ್ರಾಮಗಳೇ ಇಬ್ಭಾಗಗೊಂಡಿವೆ, ದೇವತೆಗಳು-ದೇವಸ್ಥಾನಗಳನ್ನು ಕೂಡ ಹಂಚಿಕೊಳ್ಳಲು ಜಗಳಗಳು ನಡೆದವು, ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ; ಒಟ್ಟಾರೆಯಾಗಿ ಇಲ್ಲಿನ ಸಾಮಾಜಿಕ-ಕೌಟುಂಬಿಕ ಬದುಕು ಶಿಥಿಲಗೊಂಡಿದೆ ಎಂದು ಉದಾಹರಣೆಗಳ ಸಮೇತ ಪ್ರಸ್ತುತಪಡಿಸಿದರು. ಆಲಮಟ್ಟಿ ಆಣೆಕಟ್ಟಿನಿಂದಾಗಿ ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಜನತೆಗೆ ಲಾಭವಾಗಿರಬಹುದೇ ಹೊರತು ಅಖಂಡ ವಿಜಯಪುರ ಜಿಲ್ಲೆಯ ಜನರಿಗೆ ಪ್ರಯೋಜನವಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಕೂಡ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.