ಬೀದರ್: ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಇಂದಿನಿಂದ ಡಿಸೆಂಬರ್ 22ರವರೆಗೆ ಅಗ್ನಿಪಥ ಅಗ್ನಿ ವೀರರಿಗಾಗಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ.
ದಕ್ಷಿಣ ಭಾತರದ ಅತಿ ದೊಡ್ಡ ನೇಮಕಾತಿ ರ್ಯಾಲಿ ಎಂದು ನೇಮಕಾತಿ ರ್ಯಾಲಿ ಭಾಗಿಯಾದ ಹಿರಿಯ ಸೈನ್ಯ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಒಟ್ಟು 70,357 ಯುವಕರು ನೇಮಕಾತಿಯಲ್ಲಿ ಪಾಲ್ಗೊಳ್ಳಲು ಗಡಿ ಜಿಲ್ಲೆ ಬೀದರ್ ಗೆ ಮುಖ ಮಾಡಿದ್ಧಾರೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಒಟ್ಟು 70,357 ಆಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನಿತ್ಯ ಕನಿಷ್ಠ 4 ಸಾವಿರದಿಂದ ಗರಿಷ್ಠ 4,500 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಇಂದಿನಿಂದ ಆರಂಭವಾಗಿರುವ ನೇಮಕಾತಿ ರ್ಯಾಲಿಯಲ್ಲಿ ಪ್ರತಿದಿನ ಬೆಳಿಗ್ಗೆ 6ಕ್ಕೆ ರನ್ನಿಂಗ್ ಆರಂಭವಾಗಿ 8 ಗಂಟೆಗೆ ಮುಕ್ತಾಯವಾಗಲಿದೆ ನಂತರ ಇತರೆ ಪ್ರಕ್ರಿಯೆಗಳು ನಡೆಯಲಿವೆ.
ಸೇನಾ ನೇಮಕಾತಿ ರ್ಯಾಲಿಯ ಸಂದರ್ಭದಲ್ಲಿ ಸಂಚಾರ ಒತ್ತಡ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ, ನಾಲ್ಕು ಸಿಪಿಐ, 12 ಪಿಎಸ್ಐ, 22 ಎಎಸ್ಐ, 34 ಹೆಡ್ ಕಾನ್ಸ್ಟೆಬಲ್, 37 ಪೊಲೀಸ್ ಕಾನ್ಸ್ಟೆಬಲ್ ಹಾಗೂ 50 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಗ್ನಿಪಥ ಸೇನಾ ನೇಮಕಾತಿ ರ್ಯಾಲಿ ಡಿಸೆಂಬರ್ 5 ರಿಂದ 22 ರವರೆಗೆ ನಡೆಯಲಿದೆ.