ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ೬,೮೧,೩೨,೮೪೨ ರೂ. ಮೌಲ್ಯದ ಚರಾಸ್ತಿ ಹಾಗೂ ೩,೦೪,೩೦,೮೯೩ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಸಂದರ್ಭದಲ್ಲಿ ಯತ್ನಾಳರು ಮಾಡಿರುವ ಅಧಿಕೃತ ಆಸ್ತಿ ಘೋಷಣೆಯನ್ವಯ ಅವರ ಆಸ್ತಿ, ಸಾಲದ ವಿವರವನ್ನು ಒದಗಿಸಿದ್ದಾರೆ.
ಆ ಪೈಕಿ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿ ೬,೮೧,೩೨,೮೪೨ ಕೋಟಿ ರೂ. ಮೌಲ್ಯದ ಚರಾಸ್ತಿ, ಅವರ ಧರ್ಮಪತ್ನಿ ಶೈಲಜಾ ಪಾಟೀಲ ಯತ್ನಾಳ ಹೆಸರಿನಲ್ಲಿ ೩,೪೯,೯೨,೦೧೬ ಕೋಟಿ ರೂ., ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿ ೩,೨೦,೭೦,೯೦೭ ರೂ. ಹಾಗೂ ಇನ್ನೋರ್ವ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿ ೫,೬೭,೦೨,೨೧೨ ರೂ. ಮೌಲ್ಯದ ಚರಾಸ್ಥಿ ಇದೆ.
ಯತ್ನಾಳ ಅವರು ೩೫ ಲಕ್ಷದ ಟೋಯೋಟಾ ಫಾರ್ಚೂನರ್ ವಾಹನ ಹೊಂದಿದ್ದರೆ, ಅವರ ಪತ್ನಿ ಶೈಲಜಾ ಅವರ ಹೆಸರಿನಲ್ಲಿ ಹುಂಡೈ ವೆರ್ನಾ ವಾಹನವಿದೆ. ಯತ್ನಾಳ ಅವರ ಬಳಿ ೫೦ ಗ್ರಾಂ ಬಂಗಾರ, ೨ ವಜ್ರದುಂಗುರ ಹೊಂದಿದ್ದರೆ, ಅವರ ಪತ್ನಿ ಶೈಲಜಾ ಅವರು ೩೫೦ ಗ್ರಾಂ ಹಾಗೂ ೨೭.೮೬ ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಅದೇ ತೆರನಾಗಿ ಬಸನಗೌಡ ಪಾಟೀಲರು ಸಿದ್ಧಸಿರಿ ಸೌಹಾರ್ದದಲ್ಲಿ ೧.೪೭ ಕೋಟಿ ರೂ. ಷೇರು, ಸಿದ್ದೇಶ್ವರ ಸೂಪರ್ ಬಜಾರ್ನಲ್ಲಿ ೩. ೬೮ ಕೋಟಿ ರೂ. ಷೇರು, ಎಸ್.ಎಸ್. ಡೈರಿಯಲ್ಲಿ ಷೇರು ಹಾಗೂ ಪ್ರಭುಲಿಂಗೇಶ್ವರ ಶುಗರ್ಸ್ನಲ್ಲಿ ೨ ಲಕ್ಷ ರೂ. ಮೌಲ್ಯದ ಷೇರು ಹೊಂದಿದ್ದಾರೆ, ಅದೇ ತೆರನಾಗಿ ವಿಜಯಪುರದ ಟೂರಿಸ್ಟ್ ಹೋಟೆಲ್ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂದು ಯತ್ನಾಳ ಘೋಷಣೆ ಮಾಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳರು ೩,೦೪,೩೦,೮೯೮ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು ಪ್ರಮುಖವಾಗಿ ಹೊನ್ನುಟಗಿ ಬಳಿ ೪.೩೧ ಎಕರೆ, ಐನಾಪೂರದಲ್ಲಿ ೧೦ ಎಕರೆ ಕೃಷಿಯೇತರ ಜಮೀನು, ಸಿಟಿಎಸ್ ೯೬೫ ರಲ್ಲಿ ೧೪೧೦ ಚ.ಅ. ವಿಸ್ತೀರ್ಣದ ವಾಣಿಜ್ಯ ಕಟ್ಟಡ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ಥಿರಾಸ್ತಿ ಹೊಂದಿದ್ದಾರೆ.
ಅದೇ ತೆರನಾಗಿ ಅವರ ಧರ್ಮಪತ್ನಿ ಶೈಲಜಾ ಪಾಟೀಲ ಯತ್ನಾಳರು ಒಟ್ಟು ೧,೩೭,೯೭,೦೦೦ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು ಪ್ರಮುಖವಾಗಿ ೩.೧೯ ಎಕರೆ ಐನಾಪೂರದಲ್ಲಿ ಕೃಷಿ ಭೂಮಿ ಸೇರಿದಂತೆ ಅನೇಕ ಕಡೆಗಳಲ್ಲಿ ಜಮೀನು ಹೊಂದಿದ್ದಾರೆ.
ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರು ೪೫,೩೯,೦೯೭ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಇನ್ನೋರ್ವ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ ೩೫,೬೧,೫೪೧ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಯತ್ನಾಳ ಘೋಷಿಸಿದ್ದಾರೆ.
*೬.೩೯ ಕೋಟಿ ರೂ ಸಾಲ*
ಬಸನಗೌಡ ಪಾಟೀಲ ಯತ್ನಾಳರು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿರುವ ಬಗ್ಗೆಯೂ ಘೋಷಣೆ ಮಾಡಿದ್ದು, ಸಿದ್ಧಸಿರಿಯಲ್ಲಿ ೨,೧೫,೯೫,೮೭೦ ಓಡಿ, ಅದೇ ಬ್ಯಾಂಕ್ನಲ್ಲಿ ೧,೧೯,೦೧,೪೯೨ ಓಡಿ, ೨,೧೬,೨೯,೮೮೨ ಓಡಿ, ೬೯,೯೪,೨೨೯ ರೂ. ಹಾಗೂ ಶ್ರೀ ಸಿದ್ದೇಶ್ವರ ಸೂಪರ್ ಬಜಾರ್ಗೆ ೧೮,೧೬,೮೨೦ ಹಣ ಪಾವತಿಸಬೇಕಿದ್ದು, ಒಟ್ಟು ೬,೩೯,೩೮,೨೯೩ ಕೋಟಿ ರೂ. ಸಾಲ ಹೊಂದಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಯತ್ನಾಳ ಧರ್ಮಪತ್ನಿ ಶೈಲಜಾ ಪಾಟೀಲ ಯತ್ನಾಳರ ಹೆಸರಿನಲ್ಲಿ ಸಿದ್ಧಸಿರಿಯಲ್ಲಿ ೫೬,೪೨,೭೫೧ ಓಡಿ, ಅದೇ ಬ್ಯಾಂಕ್ನಲ್ಲಿ ೧೫,೫೮೬ ಓ.ಡಿ ಹಾಗೂ ಬಿ.ಆರ್. ಪಾಟೀಲ ಅವರಿಂದ ಪಡೆದ ೧.೦೮ ಕೋಟಿ ರೂ. ಸಾಲವಿದ್ದು ಒಟ್ಟಾರೆಯಾಗಿ ೨,೩೬,೫೮,೩೩೭ ಸಾಲವಿದೆ. ಪುತ್ರ ರಾಮನಗೌಡ ಪಾಟೀಲ ಯತ್ನಾಳ ಸಿದ್ಧಸಿರಿ ಬ್ಯಾಂಕ್ನಲ್ಲಿ ೩,೬೬,೧೨,೫೦೬ ರೂ. ಓಡಿ ಹೊಂದಿದ್ದಾರೆ. ಇನ್ನೋರ್ವ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ ಅವರು ೧೬೦೨೩೬೩೩ ರೂ. ಓಡಿ ಹೊಂದಿದ್ದು, ಶ್ರೀ ಸಿದ್ದೇಶ್ವರ ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್ಗೆ ೪ ಕೋಟಿ ರೂ. ಸಂದಾಯ ಸೇರಿದಂತೆ ಒಟ್ಟು ೫,೬೦,೨೩,೬೩೩ ಕೋಟಿ ರೂ. ಸಾಲ ಹೊಂದಿದ್ದಾರೆ.
ಅದೇ ತೆರನಾಗಿ ಬಸನಗೌಡ ಪಾಟೀಲ ಯತ್ನಾಳ ಅವರು ವಿವಿಧ ಭ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದು ೫೦ ಸಾವಿರ ರೂ. ನಗದು (ಕ್ಯಾಷ್ ಇನ್ ಹ್ಯಾಂಡ್) ಅವರ ಬಳಿ ಇದ್ದು, ಅವರ ಧರ್ಮಪತ್ನಿ ಶೈಲಜಾ ಯತ್ನಾಳ ಅವರ ಬಳಿ ಕ್ಯಾಷ ಇನ್ ಹ್ಯಾಂಡ್ ರೂಪದಲ್ಲಿ ೧೫ ಸಾವಿರ ರೂ., ರಾಮನಗೌಡ ಪಾಟೀಲ ಯತ್ನಾಳ ಅವರ ಬಳಿ ಕ್ಯಾಷನ್ ಇನ್ ಹ್ಯಾಂಡ್ ರೂಪದಲ್ಲಿ ೨೫ ಸಾವಿರ ರೂ. ಇದ್ದು, ಆದರ್ಶ ಪಾಟೀಲ ಬಳಿ ಕ್ಯಾಷ್ ಇನ್ ಹ್ಯಾಂಡ್ ಇಲ್ಲ.