ವಿಜಯಪುರ: ಕಾಯಕಲ್ಪ ಪ್ರಶಸ್ತಿ ವಿಜೇತ ಜಿಲ್ಲಾಸ್ಪತ್ರೆಯಲ್ಲಿ ಮಗುವಿನ ಕಳ್ಳತನ ಪ್ರಕರಣ ನಡೆಯಿತೇ..? ಶುಕ್ರವಾರ ಮಹಿಳೆಯೋರ್ವಳು ಹಸುಗೂಸನ್ನು ತೆಗೆದುಕೊಂಡು ಹೋಗಿ ಮರಳಿ ತಾಯಿಯ ಬಳಿ ತಂದು ಬಿಟ್ಟಿದ್ದೇನೋ ಸರಿ. ಆಸ್ಪತ್ರೆಗೆ ಸಂಬಂಧವೇ ಇಲ್ಲದ ಆಕೆಯ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆ ಪೊಲೀಸರ ಸುಪರ್ದಿಗೆ ನೀಡಲಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದವರ ಮೇಟಿ ಎಂಬುವರ ಪತ್ನಿಯ ಬಾಣಂತನವಾಗಿದ್ದು, ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರದಲ್ಲಿ ಆರೈಕೆಯಲ್ಲಿದ್ದಾರೆ. ಶುಕ್ರವಾರ ಸಂಜೆ 4 ರ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಆಗ ಕುಟುಂಬಸ್ಥರು ಚೀಟಿ ಮಾಡಿಸಲೆಂದು ಹೊರ ಹೋಗಿದ್ದಾರೆ. ಈ ವೇಳೆ ತಾಯಿ ಮತ್ತು ಮಗುವಿನ ಪಕ್ಕದಲ್ಲಿದ್ದ ಮಹಿಳೆ ತನಗೆ ವೈದ್ಯರ ಪರಿಚಯವಿದ್ದು, ಮಗುವನ್ನು ತೋರಿಸಿಕೊಂಡು ಬರುತ್ತೇನೆಂದು ತೆಗೆದುಕೊಂಡು ಹೋಗಿದ್ದಾಳೆ. ಬಳಿಕ ಅದೇನಾಗಿದೆಯೋ ಮಗುವನ್ನು ವಾಪಸ್ ತೆಗೆದುಕೊಂಡು ಬಂದಿದ್ದಾಳೆ. ಇದರಿಂದ ಸಂಶಯಗೊಂಡ ಆಸ್ಪತ್ರೆ ಸಿಬ್ಬಂದಿ ಯಾವುದಕ್ಕೂ ವಿಚಾರಣೆ ನಡೆಸಲು ಪೊಲೀಸರಿಗೆ ಮಹಿಳೆಯನ್ನು ಒಪ್ಪಿಸಿದ್ದಾರೆ.