ವಿಜಯಪುರ : ಸರ್ಕಾರದ ಅತಿ ದೊಡ್ಡ ಆದಯದ ಮೂಲವೇ ಅಬಕಾರಿಯಿಂದ ಬರುತ್ತದೆ. ವರ್ಷಕ್ಕೆ 27 ರಿಂದ 29 ಸಾವಿರ ಕೋಟಿ ಆದಾಯ ನೀಡುವ ಕರ್ನಾಟಕ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಸಮಸ್ಯೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಮಗೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಗುರುಸ್ವಾಮಿ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟಗಾರರಿಗೆ ಹೊಸ ಇ-ಇಂಡೆಂಟ್ ನಿಂದ ಸಮಸ್ಯೆಯಾಗುತ್ತಿದೆ. ಇಂಡೆಂಟಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಅವುಗಳ ಕುರಿತು ನಾವು ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಸರ್ಕಾರ ಮಾತ್ರ ಅವುಗಳನ್ನು ಸರಿಪಡಿಸುವುದಾಗಿ ಹೇಳಿಕೆ ನೀಡುತ್ತದೆ. ಯಾವುದೇ ಪ್ರಯೋಜನವಾಗುತ್ತಿಲ್ಲ. ಸಮಸ್ಯೆಗೆ ಪರಿಹಾರ ದೊರಕದೇ ಇದ್ದಲ್ಲಿ, ಆಗಷ್ಟ ತಿಂಗಳಲ್ಲಿ ಮದ್ಯ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
1965 ರಲ್ಲಿನ ಅಬಕಾರಿ ಉದ್ಯಮ ಕಾನೂನು ಹಾಗೂ ನಿಯಮಗಳನ್ನು ಪುನರ್ ಪರಿಶೀಲನೆ ಮಾಡಬೇಕು. ಹೊಸ ವ್ಯವಸ್ಥೆಗೆ ತಕ್ಕಂತೆ ಕಾನೂನುಗಳನ್ನು ರೂಪಿಸಿ ವ್ಯಾಪಾರ ಉದ್ಯಮಕ್ಕೆ ಅನುಕೂಲ ಮಾಡಿಕೊಡಲು ಸಮಿತಿಯೊಂದನ್ನು ನೇಮಕ ಮಾಡಬೇಕು. ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ರಷ್ಟು ಲಾಭಾಂಶ ಮಾರಾಟಗಾರರಿಗೆ ನೀಡಬೇಕು. ಹೊರ ರಾಜ್ಯಗಳಿಂದ ಬರುವ ನಕಲಿ ಮದ್ಯ ಹಾಗೂ ತಯಾರಕರನ್ನು ಹಿಡಿದು ಕಠೀಣ ಕಾನೂನಿಗೆ ಒಳಪಡಿಸಿ, ಮದ್ಯ, ಬೀಯರ್ ಕಂಪನಿಯವರು ನೀಡುತ್ತಿರುವ ಸ್ಕೀಂ 11ಎ ತಿದ್ದುಪಡೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ಒಟ್ಟು 11 ಸಾವಿರ ಸನ್ನದುದಾರರು ಇದ್ದೇವೆ. ನಮಗೆ ಈ ಉದ್ಯಮವೇ ಜೀವನೋಪಾಯಕ್ಕೆ ಆಧಾರವಾಗಿದೆ. ಅಷ್ಟೇ ಅಲ್ಲ ನಮ್ಮಲ್ಲಿ ಲಕ್ಷಾಂತರ ಜನ ಉದ್ಯೋಗ ಮಾಡುತ್ತಿದ್ದಾರೆ. ಹಾಗಾಗಿ ಈ ಉದ್ಯಮದ ಉಳಿವಿಗಾಗಿ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಬಹಳಷ್ಟು ಅಧಿಕಾರಿಗಳು ಅಬಕಾರಿ ಕಾನೂನನ್ನು ದುರುಪಯೋಗಪಡಿಸಿಕೊಂಡು ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ. ಆ ಅಧಿಕಾರಿಗಳು ಸರ್ಕಾರದ ಆದಾಯವನ್ನು ಲೆಕ್ಕಿಸದೇ ಸ್ವಹಿತಕ್ಕಾಗಿ ನಮಗೆ ತೊಂದರೆ ಕೊಡುತ್ತಿದ್ದಾರೆ. ಅಂತವರ ವಿರುದ್ಧ ಕಠೀಣ ಕಾನೂನು ಕ್ರಮ ಜರುಗಿಒಸುವುದಲ್ಲದೇ ಹಲವಾರು ವರ್ಷಗಳಿಂದ ಒಂದೇ ಕಡೆ ನೌಕರಿ ಮಾಡುತ್ತಿರುವ ಅಬಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಅಲ್ಲದೇ ಹೋಟೆಲ್, ಡಾಬಾ, ಬಿಡಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ ಅಧಿಕಾರಿಗಳ ಕಿರುಕುಳ ತಪ್ಪಿಸಲು ಅವರಿಗೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವಿಜಯಪುರ ಜಿಲ್ಲಾದ್ಯಕ್ಷ ಪ್ರಕಾಶ ಶೆಟ್ಟರ, ಚಿತ್ರದುರ್ಗಾ ಜಿಲ್ಲಾಧ್ಯಕ್ಷ ಬಾಬುರೆಡ್ಡಿ, ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ ಸೇರಿದಂತೆ ಬೆಳಗಾವಿ ವಿಭಾಗದ ಮದ್ಯ ಮಾರಾಟ ಸನ್ನದುದಾರರು ಭಾಗವಹಿಸಿದ್ದರು.