ವಿಜಯಪುರ: ವಿಜಯಪುರ: ಹಗಲು-ರಾತ್ರಿ ವಿಜಯಪುರ ನಗರ ಶಾಸಕ ಕೇವಲ ವಿಷಕಾರುವ ಕೆಲಸ ಮಾಡುತ್ತಿದ್ದಾರೆ, ವಿವಿಧ ಧರ್ಮ, ಜಾತಿ, ನಾಯಕರ ಬಗ್ಗೆ ಅಶ್ಲೀಲ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಎಂ.ಬಿ. ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಬಾಂಧವರಿಗೆ ಕಚೇರಿಗೆ ಬರಬೇಡಿ, ಬುರ್ಖಾ, ಟೋಪಿ, ಗಡ್ಡದಾರಿಗಳು ಆಫೀಸ್ ಬರುವವರು ಬೇಕಾಗಿಲ್ಲ ಎಂದು ಹೇಳಿದ ಯತ್ನಾಳ ಕನಿಷ್ಠ ತಿಳಿವಳಿಕೆ ಇಲ್ಲದ ವ್ಯಕ್ತಿ, ಶಾಸಕನಾದವನು ಎಲ್ಲರಿಗೂ ಶಾಸಕ. ಬಸವಣ್ಣನವ ಹೆಸರು ಯತ್ನಾಳರಿಗೆ ಇರಿಸಿದ್ದಾರೆ, ಯತ್ನಾಳರ ತಂದೆ ಒಳ್ಳೆಯ ವ್ಯಕ್ತಿ, ಆದರೆ ಬಸವಣ್ಣನವರು ಎಲ್ಲರಿಗೂ ಇವ ನಮ್ಮವ ಎಂದು ಹೇಳಿದ್ದಾರೆ, ಇತರರನ್ನು ಹಳಿಯಬೇಡ ಎಂದು ಹೇಳಿದ್ದಾರೆ. ಆದರೆ ಬಸನಗೌಡರು ಬಸವಣ್ಣನವರ ಆಚಾರ-ವಿಚಾರ, ತತ್ವ-ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕಳೆದ ಐದು ವರ್ಷಗಳ ಕಾಲ ನಿರಂತರವಾಗಿ ದ್ವೇಷವನ್ನು ಬಿತ್ತುವ ಅವಮಾನಕರ, ಅಶ್ಲೀಲ ಹೇಳಿಕೆಗಳನ್ನು ಕೊಡುತ್ತಿದ್ದಾರೆ, ಅನೇಕ ಧರ್ಮ, ಜಾತಿ, ನಾಯಕರ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ಪ್ರತಿದಿನ ನಾಲ್ಕು ಬಾರಿ ವಿಷಕಾರುವ ಕೆಲಸ ಮಾಡುತ್ತಿದ್ದಾರೆ, ಬಾಯಿ ತೆಗೆದರೆ ಸಾಕು ವಿಷ ಉಗುಳುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಹುಲ್ ಗಾಂಧೀ ಅವರಿಗೆ ಹುಚ್ಚ ಎನ್ನುವ ಪದ ಬಳಸಿದ್ದಾರೆ, ಯತ್ನಾಳರ ನಡವಳಿಕೆ ಗಮನಿಸಿದರೆ ಕಳೆದ ಐದು ವರ್ಷಗಳಲ್ಲಿ ರಾಜ್ಯದ ಜನತೆ ಅವರನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ಯತ್ನಾಳ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧೀಜಿ ಅವರಿಗೆ ವಿಷಕನ್ಯೆ, ಪಾಕ್ ಏಜೆಂಟ್ ಅನೇಕ ಅಸಂಬದ್ಧ ಪದಗಳನ್ನು ಕೆಟ್ಟ ಮಾತುಗಳನ್ನಾಡುತ್ತಿದ್ದಾರೆ ಎಂದು ದೂರಿದರು.
ಸೋನಿಯಾ ಗಾಂಧೀ ಅವರು ರಾಜೀವ ಗಾಂಧೀ ಅವರ ಕೈ ಹಿಡಿದು ದೇಶದ ಸೊಸೆಯಾಗಿ ಭಾರತವನ್ನು ಪ್ರಧಾನಿಯಾಗಲು ಎರಡು ಬಾರಿ ಅವಕಾಶವಿದ್ದರೂ ಸಹ ಅದನ್ನು ತ್ಯಾಗ ಮಾಡಿದ್ದು ಸೋನಿಯಾಜಿ ಎಂಬುದನ್ನು ಯತ್ನಾಳ ಅರ್ಥೈಸಿಕೊಳ್ಳಬೇಕು ಎಂದರು. ಇದೇ ಯತ್ನಾಳರು ಕಾಂಗ್ರೆಸ್ ಪಕ್ಷದ ಕೆಟ್ಟ ಅವಾಚ್ಯ ಶಬ್ದ, ಹಿಂದೆ ಸೋಮಣ್ಣ ಅವರನ್ನು ಬೈದರು, ಮುಂದೆ ಗೆಳೆತನವಾಯಿತು. ಯಡಿಯೂರಪ್ಪ ಹಾಗು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಸಾವಿರ ಹೇಳಿಕೆಗಳನ್ನು ಯತ್ನಾಳ ನೀಡಿದ್ದಾರೆ, ನಿರಂತವಾಗಿ ಅವರನ್ನು ತೆಗಳುತ್ತಲೇ ಬಂದಿದ್ದಾರೆ, ಕೆಟ್ಟ ಪದ ಪ್ರಯೋಗಿಸಿ ಟೀಕಿಸಿದ್ದಾರೆ. ಈಗ ಅವರನ್ನು ಹೊಗಳುತ್ತಿದ್ದಾರೆ ಎಂದು ಪಾಟೀಲ ವ್ಯಂಗ್ಯವಾಡಿದರು. ಪಕ್ಷಕ್ಕೆ ಶೆಟ್ಟರ್ ಚೂರಿ ಹಾಕಿದ್ದಾರೆ ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ಕೆಜೆಪಿ ಕಟ್ಟಿದಾಗ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕಿಲ್ಲವೇ? ಕೆಜೆಪಿ ವಿಷಯವಾಗಿ ದೊಡ್ಡ ಮಟ್ಟದ ವಿಷಯಗಳಿವೆ, ಅದನ್ನು ಸಮಯ ಬಂದಾಗ ಬಹಿರಂಗಪಡಿಸುವೆ ಎಂದರು. ಪರಮೇಶ್ವರ ಅವರ ಮೇಲೆ ಹಲ್ಲೆ ಹೇಯಕೃತ್ಯ
ಚುನಾವಣೆ ಚುನಾವಣೆಯಾಗಿ ಎದುರಿಸಬೇಕು, ಅಭಿವೃದ್ಧಿ ವಿಷಯವಾಗಿ ಪ್ರಚಾರ ನಡೆಸಬೇಕು, ಪ್ರತಿಪಕ್ಷದವರ ವೈಫಲ್ಯಗಳನ್ನು ಜನರ ಮುಂದೆ ಇರಿಸಿ ಮತ ಕೇಳಬೇಕು, ಅದನ್ನು ಬಿಟ್ಟು ಕಲ್ಲು ಒಗೆಯುವುದು, ಪ್ರಚಾರಕ್ಕೆ ಅಡ್ಡಿಪಡಿಸುವುದು, ಹಲ್ಲೆ ಮಾಡುವಂತಹ ಹೇಯ ಕೃತ್ಯ, ಡಾ.ಜಿ. ಪರಮೇಶ್ವರ ಅವರ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಎಂ.ಬಿ. ಪಾಟೀಲ ಹೇಳಿದರು. ನನ್ನ ಧರ್ಮಪತ್ನಿ ಆಶಾ ಪಾಟೀಲರು ಹುಬನೂರ ಹೋದ ಸಂದರ್ಭದಲ್ಲಿ ಪ್ರಚಾರಕ್ಕೆ ಅಡ್ಡಿಪಡಿಸಿದರು. ಹಲ್ಲೆ ನಡೆಸಲು ಮುಂದಾದರು. ಕೆಲ ದಿನಗಳ ಹಿಂದೆ ಯುವಕನೋರ್ವ ಹಿರಿಯ ಮನುಷ್ಯರೊಬ್ಬರಿಗೆ ಅಶ್ಲೀಲ ಪದಪ್ರಯೋಗಿಸಿದ, ಆಗ ಹಿರಿಯರಿಗೆ ಅವಮಾನ ಸರಿಯಲ್ಲ ನಾನು ಬುದ್ಧಿವಾದ ಹೇಳಿದೆ, ಮಗನ ವಯಸ್ಸಿನ ಯುವಕ ಎಂದು ಬುದ್ಧಿವಾದ ಹೇಳಿದ್ದೇನೆ, ಆದರೆ ಅದನ್ನೇ ಗೂಂಡಾಗಿರಿ ಎಂದರು.