ಸಾಗರ: ತಾಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟಿ ಅನೂಗೌಡ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ನಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಜಮೀನಿನ ವಿವಾದದ ಕಾರಣ ಸ್ಥಳೀಯ ನಿವಾಸಿಗಳಾದ ನೀಲಮ್ಮ ಮತ್ತು ಮೋಹನ್ ಅವರು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅವರು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನೂಗೌಡ ಅವರ ತಂದೆ ತಾಯಿ ಕಾಸ್ಪಾಡಿಯಲ್ಲಿ ಜಮೀನು ನೋಡಿಕೊಳ್ಳುತ್ತಿದ್ದು, ನಟಿ ಬೆಂಗಳೂರಿನಿಂದ ಆಗಾಗ ಊರಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.
ಅನು ಗೌಡ ತಮಿಳಿನಲ್ಲಿ ಮೌನಮಾನ ನೇರಂ, ಕಲಕಲ್, ಶಂಕರ, ಆಡಾದ ಆಟಮೆಲ್ಲ, ಕನ್ನಡದಲ್ಲಿ ಸವಿಸವಿ ನೆನಪು, ಭೂಗತ, ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಸುದೀಪ್ರವರೊಂದಿಗೆ ಕೆಂಪೇಗೌಡ, ರಮ್ಯಾಗೆ ಅಕ್ಕನಾಗಿ ದಂಡಂ ದಶಗುಣಂ, ಶಿವರಾಜ್ಕುಮಾರ್ರ ಸುಗ್ರೀವ, ಪುನೀತ್ ಚಿತ್ರವಾದ ಹುಡುಗರು ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ಛಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಬೃಂದಾವನ’ದಲ್ಲಿ ದರ್ಶನ್ ಮನೆಯ ಸೊಸೆಯಾಗಿ ನಟಿಸಿದ್ದಾರೆ.