ವಿಜಯಪುರ: ಬಾಡಿಗೆ ಮನೆಯಲ್ಲಿ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡಿದ ಆರೋಪಿಗೆ 5 ವರ್ಷಗಳ ಶಿಕ್ಷೆ ಹಾಗೂ 90 ಸಾವಿರ ರೂ. ದಂಡ ವಿಧಿಸಿ ವಿಜಯಪುರ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಕಲ್ಲಪ್ಪ ಸುಭಾಸ ಹರಿಜನ ಶಿಕ್ಷೆಗೊಳಗಾದ ಆರೋಪಿ. ಈತ ಇಂಡಿ ಪಟ್ಟಣದ ನೂರಾನಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಆದರೆ ಶ್ರೀಮಂತಿಕೆಯ ಹಗಲು ಕನಸು ಕಂಡ ಈತ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ, ಚಲಾವಣೆ ಮಾಡುವ ದುರುದ್ದೇಶದಿಂದ ಎಪ್ಸಾನ್ ಕಂಪನಿಯ ಝರಾಕ್ಸ್ ಜೊತೆಗೆ ಪ್ರಿಂಟರ್ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡು, ಈ ದಂಧೆಯಲ್ಲಿ ತೊಡಗಿದ್ದ.
ಮುದ್ರಿಸಿದ 200 ರೂ. ಮುಖಬೆಲೆಯ 5 ಸಾವಿರ ನೋಟು ಹಾಗೂ 100 ರೂ. ಮುಖಬೆಲೆಯ ಭಾರತೀಯ ಕರೆನ್ಸಿ ನಕಲಿ ನೋಟುಗಳನ್ನು ಮುದ್ರಿಸಿ, ಚಲಾವಣೆ ಮಾಡಲು ತನ್ನ ಬಳಿ ಇಟ್ಟುಕೊಂಡು, 2019ರ ಮಾ. 9 ರಂದು ಸ್ಕಾರ್ಪಿಯೋ ಜೀಪ್ನಲ್ಲಿ ಹೊರಟಿದ್ದ. ಖಚಿತ ಮಾಹಿತಿ ಮೇರೆಗೆ ಆಗಿನ ಇಂಡಿ ಸಿಪಿಐ ಎಚ್.ಎಂ. ಪಾಟೀಲ, ಆರೋಪಿ ಇಂಡಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಹೊರಟಿದ್ದಾಗ, ನ್ಯೂ ಕಾವೇರಿ ಢಾಬಾ ಬಳಿ ಆರೋಪಿಯನ್ನು ವಶಕ್ಕೆ ಪಡೆದಾಗ, ಆತನ ಬಳಿ ನಕಲಿ ನೋಟುಗಳು ಪತ್ತೆಯಾಗಿದ್ದವು. ಬಳಿಕ ವಿಚಾರಣೆ ನಡೆಸಿದಾಗ, ಇಂಡಿ ಪಟ್ಟಣದ ನೂರಾನಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ನಕಲಿ ನೋಟು ಪ್ರಿಂಟ್ ಮಾಡುತ್ತಿರುವುದಾಗಿ ಬಾಯ್ಬಿಡುತ್ತಿದ್ದಂತೆಯೇ, ಪ್ರಕರಣ ದಾಖಲಿಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್.ಪಿ. ಅವರು ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆ ಪರಿಶೀಲಿಸಿ, ಆರೋಪಿ ಮೇಲೆ ಆರೋಪ ರುಜುವಾತಾಗಿದೆ ಎಂದು ತೀರ್ಮಾನಿಸಿ, ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ 1ನೇ ಅಧಿಕ ಸರ್ಕಾರಿ ಅಭಿಯೋಜಕಿ ವನಿತಾ ಎಸ್. ಇಟಗಿ ವಾದ ಮಂಡಿಸಿದ್ದರು.