ವಿಜಯಪುರ: ಪುರ ನಗರದ ಸ್ವಚ್ಚತಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಇಂಡಿ ರಸ್ತೆಯಲ್ಲಿ ಸುಮಾರು 32 ಏಕರೆ ಜಾಗೆಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಈ ಘನ ತ್ಯಾಜ್ಯದಿಂದ ಬೇರ್ಪಡಿಸಲಾದ ಪ್ಲಾಸ್ಟಿಕ್ನ್ನು ಸಿಮೆಂಟ್ ಪ್ಯಾಕ್ಟರಿಗೆ ಇಂದನವಾಗಿ ಬಳಸಲು ಕಳುಹಿಸಿ ಕೊಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹೇಳಿದರು.
ನಗರದ ವಾರ್ತಾ ಮತ್ತು ಸಂಪರ್ಕ ಇಲಾಖೆ ಕಚೇರಿಯಲ್ಲಿ ವಾರ್ತಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾನಗರ ಪಾಲಿಕೆ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಅವರು, ನಗರದಲ್ಲಿ ಪ್ರತಿ ನಿತ್ಯ 10 ಟಿಪ್ಪರ್ ಹಾಗೂ 10 ಟ್ರ್ಯಾಕ್ಟರ್ ಮೂಲಕ ಸುಮಾರು 120 ಟನ್ ತ್ಯಾಜ್ಯವನ್ನು ನಗರದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ. ಮತ್ತೇ ಅದನ್ನು ವೈಜ್ಞಾನಿಕವಾಗಿ ಒಣಕಸ, ಹಸಿಕಸ, ಪ್ಲಾಸ್ಟಿಕ್ನ್ನು ಬೇರ್ಪಡಿಸಲಾಗುತ್ತದೆ. ನ್ಯಾಷಿನಲ್ ಗ್ರೀನ್ ಟ್ರೂಂಬನಲ್ ಮಾರ್ಗ ಸೂಚಿ ಅನ್ವಯ ಸುಮಾರು 80 ಸಾವಿರ ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಆ ಮೂಲಕ ನಗರದ ಸಾರ್ವಜನಿಕರಿಗೆ ಸ್ವಚ್ಚ ಪರಿಸರ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಬಡವರಿಗೆ ಮನೆ
ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 1493 ಜಿ.ಪ್ಲಸ್ ಮಾದರಿ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಮನೆಗಳು ಬಡವರಿಗೆ ಸೂರು ಕಲ್ಪಿಸಲಿವೆ. ಇನ್ನುಳಿದಂತೆ ಡಾ.ಅಂಬೇಡ್ಕರ್ ವಸತಿ ಯೋಜನೆಯಲ್ಲಿ 228 ಮನೆಗಳು ಹಾಗೂ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 300 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಗ್ಯಾಸ್ ಪೈಪ್ ಅಳವಡಿಕೆ
ನಗರದಾದ್ಯಂತ ಮನೆ ಮನೆಗೆ ಪೈಪ್ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಖಾಸಗಿ ಕಂಪನಿಯಿಂದ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು ಕೇಲವೇ ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಅದರಂತೆ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸಲಾಗಿದ್ದು, ಈವರೆಗೂ 2600 ಜನ ಬೀದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ಸ್ವ ಉದ್ಯೋಗಕ್ಕಾಗಿ ಕಿರು ಸಾಲ ನೀಡಲಾಗಿದೆ. ಸಾರ್ವಜನಿಕರಿಗೆ ಟ್ಯಾಕ್ಸ್ ಕಟ್ಟಲು ಅನುಕೂಲವಾಗುವಂತೆ ಭಾರತ ಬಿಲ್ (Online) ಪೇಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಟ್ಟಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನಗರದಲ್ಲಿ ಮಹಾನಗರ ಪಾಲಿಕೆಯ 3 ವಲಯ ಕಚೇರಿಗಳನ್ನು ತೆರೆಯಲಾಗಿದೆ ಎಂದರು.