ವಿಜಯಪುರ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ಪ್ರಸ್ತುತ ಲಭ್ಯವಿರುವ ನೀರಿನ ಲೆಕ್ಕಾಚಾರದ ಬಗ್ಗೆ ಚರ್ಚಿಸಿದ ಬಳಿಕ ಅಂತಿಮವಾಗಿ, ಮುಂಗಾರು ಹಂಗಾಮಿಗೆ ಜುಲೈ 26ರಿಂದಲೇ ಅನ್ವಯವಾಗುವಂತೆ ಮುಂಗಾರು ಹಂಗಾಮಿಗೆ ಜಲಾಶಯಗಳಿಂದ ನೀರು ಪೂರೈಸಲು ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯು ತೀರ್ಮಾನ ತೆಗೆದುಕೊಂಡಿತು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಆಲಮಟ್ಟಿ ಕಚೇರಿಯ ಸಭಾಂಗಣದಲ್ಲಿ, ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ, ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ ಕತ್ತಿ ಅವರ ಸಮ್ಮುಖದಲ್ಲಿ ಜುಲೈ 26ರಂದು ನಡೆದ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಚರ್ಚೆ ನಡೆಯಿತು.
ಆಲಮಟ್ಟಿ ಮತ್ತು ನಾರಾಯಣಪುರ ಎರಡೂ ಜಲಾಶಯಗಳಲ್ಲಿ 97.491 ಟಿಎಂಸಿ ಜೀವಜಲ ಲಭ್ಯವಿದೆ. ಮುಂಗಾರು ಹಂಗಾಮಿನ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರಿನ ಪ್ರಮಾಣದ ಅಗತ್ಯವಿದೆ. ಅಗತ್ಯ ಬಳಕೆಗೆ ಮುಂಗಾರು ಹಂಗಾಮಿಗೆ 13 ಟಿಎಂಸಿ ನೀರು ಬೇಕಾಗುತ್ತದೆ. ಇವೆರಡು ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರಿ ಬೇಕಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹಣೆಯಾಗಿದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣವು ಜಲಾಶಯದಲ್ಲಿ ಸಂಗ್ರಹಣೆಯಾಗಿರುವುದರಿಂದ ಹಾಗೂ ಮುಂಬರುವ ದಿನಗಳಲ್ಲಿ ಬರುವ ಒಳಹರಿವನ್ನು ಗಮನದಲ್ಲಿರಿಸಿಕೊಂಡು 2022-23 ರ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲ, ಆಣಿಕಟ್ಟು ಹಾಗೂ ಮುಖ್ಯ ಸ್ಥಾವರಗಳ ಕ್ಲೋಜರ್ ಅವಧಿಯ ಕಾಮಗಾರಿಗಳ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುಂಗಾರು ಹಂಗಾಮಿಗೆ ನೀರು ಪೂರೈಸಬಹುದಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ ಸಭೆಗೆ ತಿಳಿಸಿದರು.
ನಮ್ಮ ನಮ್ಮ ಕ್ಷೇತ್ರಗಳಲ್ಲಿ ಜೀವ ಜಲದ ಅಭಾವವಿದೆ. ರೈತರು ನೀರು ಕೇಳುತ್ತಿದ್ದಾರೆ. ಕಾಲುವೆಗಳಿಗೆ ಈ ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿದ್ದ ಶಾಸಕರಾದ ಅಮರೇಗೌಡ ಬಯ್ಯಾಪುರ, ರಮೇಶ ಭೂಸನೂರ, ಶಿವನಗೌಡ ನಾಯಕ, ರಾಜುಗೌಡ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ ಮತ್ತು ಇತರರು ಸಭೆಗೆ ಮನವರಿಕೆ ಮಾಡಿದರು.
ಸಭೆಯಲ್ಲಿದ್ದ ಹಾಜರಿದ್ದ ನೀರಾವರಿ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚಿಸಿದ ಬಳಿಕ,
ಎಲ್ಲ ಶಾಸಕರ ಒಮ್ಮತದ ಅಭಿಪ್ರಾಯ ಆಧರಿಸಿ,
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಒಳಹರಿವು ಇರುವವರೆಗೆ ಮಳೆಯನ್ನು ಆಧಾರಿಸಿ, ಸತತವಾಗಿ ಹಾಗೂ ಒಳಹರಿವು ಸ್ಥಗಿತವಾದ ನಂತರ 14 ದಿನ ಚಾಲೂ ಹಾಗೂ 8 ದಿನ ಬಂದ ಪದ್ಧತಿ ಅನುಸರಿಸಿ ಜುಲೈ 26ರಿಂದ ಮುಂಗಾರು ಹಂಗಾಮಿಗೆ ಜಲಾಶಯಗಳಿಂದ ನೀರು ಪೂರೈಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಮುಂಗಾರು ಮುಗಿದ ಕೂಡಲೇ ಕ್ಲೋಸರ್ ವರ್ಕ ಪೂರ್ಣಗೊಳಿಸಲು ಕೂಡ ಸಭೆಯಲ್ಲಿ ನಿರ್ಣಯಿಸಲಾಯಿತು.
*ರೈತ ಬಾಂಧವರಲ್ಲಿ ಮನವಿ:* ಸಮಸ್ತ ಅಚ್ಚುಕಟ್ಟು ರೈತ ಬಾಂಧವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೋಲಾಗದಂತೆ ಹಿತಮಿತ ಬಳಸಲು ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳೊಂದಿಗೆ ಸಹಭಾಗಿತ್ವ ನೀಡಲು ಇದೆ ವೇಳೆ ಸಚಿವರಾದ ಸಿಸಿ ಪಾಟೀಲ ರೈತ ಬಾಂಧವರಲ್ಲಿ ಮನವಿ ಮಾಡಿದರು.
*ನವೆಂಬರ್ ಅತ್ಯಂಕ್ಕೆ ಸಭೆ:*
ನವೆಂಬರ್ 2022ರಲ್ಲಿ ಎರಡೂ ಜಲಾಶಯಗಳ ಸಂಗ್ರಹಣೆಯನ್ನು ಗಮನದಲ್ಲಿರಿಸಿಕೊಂಡು 2022-23ನೇ ಸಾಲಿನ ಹಿಂಗಾರು ಹಂಗಾಮಿನ ನೀರವಾರಿ ಸಲಹಾ ಸಮಿತಿ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ ನಡಹಳ್ಳಿ, ಬಸನಗೌಡ ದದ್ದಲ್, ಡಿ.ಎಸ್.ಹೂಲಗೇರಿ, ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಪಿ. ಸುನೀಲಕುಮಾರ, ನಿಗಮದ ಮುಖ್ಯ ಎಂಜಿನಿಯರ್ ಎಚ್ ಸುರೇಶ, ಅಧೀಕ್ಷಕ ಎಂಜಿನಿಯರ್ ಬಿ.ಬಸವರಾಜ, ಆಟೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಮೋಹನ್ ಆರ್. ಹಲಗತ್ತಿ ಸೇರಿದಂತೆ ನಿಗಮದ ಹಿರಿ ಕಿರಿ ಅಧಿಕಾರಿಗಳು ಇದ್ದರು.