ಹುಬ್ಬಳ್ಳಿ: ರೈತರು ಇಂದು ಹಲವಾರು ಕಷ್ಟಗಳ ನಡುವೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರೆಯಬೇಕು. ಅವರಿಗೆ ಸೂಕ್ತ ರೀತಿಯ ಸಹಾಯ ಸಹಕಾರ ನೀಡುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ನಿರ್ದೇಶಕ ಬಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.
ಇಂದು ಉಣಕಲ್ನ ನವೀನ ಹೋಟೇಲ್ ನಲ್ಲಿ
ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹಾಗೂ ಭಾರತೀಯ ಸಂಬಾರು ಮಂಡಳಿ ಕೊಚ್ಚಿನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ನಾಣ್ಣುಡಿಯಂತೆ ರೈತರು ಶ್ರಮವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ಯೋಗ್ಯ ಬೆಲೆ ಸಿಗಬೇಕಾಗಿದೆ. ಎಲ್ಲರೂ ರೈತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ವಾಣಿಜ್ಯ ಕ್ಷೇತ್ರದಲ್ಲಿ ಹುಬ್ಬಳ್ಳಿ ಮುಂಚೂಣಿಯಲ್ಲಿದೆ. ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಾರು ಅಭಿವೃದ್ಧಿ ಮಂಡಳಿಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿದೆ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಸಂಬಾರು ಮಂಡಳಿ ಹುಬ್ಬಳ್ಳಿಗೆ ಬರಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪ್ರಯತ್ನ ಮಾಡಿದೆ. ಪ್ರತಿ ವರ್ಷ ಮೆಣಸು ಮೇಳವನ್ನು ಆಯೋಜನೆ ಮಾಡಲಾಗುತ್ತದೆ. ಬೆಳೆಗಾರರಿಗೆ ಒಳ್ಳೆಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಂಡಿರುವುದು ಸಂತಸದ ವಿಷಯ. ವಿದೇಶಿಗರು ಭಾರತೀಯ ಮೆಣಸಿನ ಆಹಾರಕ್ಕೆ ಮಾರು ಹೋಗಿದ್ದಾರೆ. ಅವರು ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಸಂಬಾರು ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆ ದೊರೆಯಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಆರ್. ಗಿರೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಳು ಮೆಣಸು ಮತ್ತು ಎಲಕ್ಕಿಯನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಭಾರತದ ಕಾಳುಮೆಣಸಿನ ರಾಣಿ ಎಂದು ಪ್ರಸಿದ್ಧಿಗಳಿಸಿದ್ದ ಗೇರುಸೊಪ್ಪದ ಚೆನ್ನಭೈರಾದೇವಿ ಸಂಬಾರು ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಈ ಹಿಂದೆ ಹೊನ್ನಾವರ, ಭಟ್ಕಳ ಬಂದರಿನಿಂದ ಸಂಬಾರು ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿತ್ತು. ಸಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ರಾಜ್ಯವು ಸ್ವಾವಲಂಬನೆ ಸಾಧಿಸಿದೆ. 2013 ರಲ್ಲಿ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಯಿತು. ಸಂಬಾರು ಪದಾರ್ಥಗಳ ರಫ್ತು ಮತ್ತು ಉತ್ಪಾದನೆ ಪ್ರಮಾಣ ಹೆಚ್ಚಳ ಹಾಗೂ ಖರೀದಿದಾರರ ಮತ್ತು ಮಾರಾಟಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಮಹತ್ವ ಕುರಿತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಭಾರತೀಯ ಸಂಬಾರು ಮಂಡಳಿ ಉಪ ನಿರ್ದೇಶಕ ಡಾ. ಜಾನ್ಸಿ. ಎಂ, ಸಿದ್ದಾಪುರದ ಅಘನಾಶಿನಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ
ಎಸ್.ಆರ್. ಹೆಗಡೆ, ಕುಂದಗೋಳದ ಅಮರ ಶಿವ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಉಮೇಶ ಹೆಬಸೂರ, ಹುಬ್ಬಳ್ಳಿಯ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ರಾಜು ಹನಮಕ್ಕನವರ, ರಾಯಚೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರಪ್ಪ, ಕೊಟ್ಟೂರೇಶ್ವರ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷೆ ಅರ್ಚನಾ ಸಜ್ಜನ, ತೋಟಗಾರಿಕೆ ಇಲಾಖೆಯ ಕಾಶಿನಾಥ ಭದ್ರನವರ ಸೇರಿದಂತೆ ಖರೀದಿದಾರರು, ರೈತರು, ಮಂಡಳಿಯ ಸಿಬ್ಬಂದಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇತರರು ಭಾಗವಹಿಸಿದ್ದರು. ರವೀಂದ್ರ ಸ್ವಾಗತಿಸಿದರು. ಚಿದಾನಂದಪ್ಪ ವಂದಿಸಿದರು.