ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಉತ್ಪನ್ನವನ್ನು ಪ್ರತಿ ಕ್ವಿಂಟಲ್ಗೆ 5335 ರೂ.ಗಳಂತೆ ಖರೀದಿಸಲು ಜಿಲ್ಲೆಯಾದ್ಯಂತೆ 31 ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳನ್ವಯ ರೈತರ ನೋಂದಣಿಗಾಗಿ 2023ರ ಮಾರ್ಚ್ 31ರವರೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 80595 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದ್ದು, ಅಂದಾಜು 604462 ಕ್ವಿಂಟಲ್ ಕಡಲೆ ಇಳುವರಿ ಬರುಬಹುದೆಂದು ನಿರೀಕ್ಷಿಸಲಾಗಿದೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಕ್ವಿಂಟಲ್ಗೆ ರೂ. 4600 ರಿಂದ 4750 ರವರೆಗೆ ಮಾರಾಟವಾಗುತ್ತಿದ್ದು, ಜಿಲ್ಲೆಯಲ್ಲಿ ಬೇಡಿಕೆ ಬಂದ ಕೃಷಿ ಪತ್ತಿನ ಸಹಕಾರಿ ಸಂಘ-ಸಂಸ್ಥೆಗಳನ್ನು ಖರೀದಿ ಕೇಂದ್ರಗಳೆಂದು ಪರಿಗಣಿಸಿ ರೈತರ ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಯಿತು.
ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ನೊಂದಣಿಯನ್ನು ದಿನಾಂಕ : 31-03-2023ರವರೆಗೆ ಹಾಗೂ ಖರೀದಿ ಪ್ರಕ್ರಿಯೆಯನ್ನು ದಿನಾಂಕ : 16-02-2023 ರಿಂದ 15-05-2023ರವರೆಗೆ ನಿಗದಿಪಡಿಸಿ ನಿರ್ಧರಿಸಲಾಗಿದೆ.
ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯ ಡಿಬಿಟಿ ಮೂಲಕ ಪಾವತಿ ಮಾಡಬೇಕು. ಖರೀದಿ ಕೇಂದ್ರಗಳಲ್ಲಿ ಲೋಪ ದೋಷ ಕಂಡು ಬಂದಲ್ಲಿ ಸಂಬಂಧಿಸಿದ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಸಹಕಾರ ಸಂಘÀಗಳ ಉಪ ನಿಬಂಧಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯಲ್ಲಿ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಉಗ್ರಾಣಗಳಲ್ಲಿ 50400 ಕ್ವಿಂಟಾಲ್ ದಾಸ್ತಾನು ಮಾಡಲು ಸ್ಥಳಾವಕಾಶವಿರುವುದರಿಂದ ದಾಸ್ತಾನು ಪೂರ್ಣಗೊಂಡ ನಂತರ ಪಕ್ಕದ ಜಿಲ್ಲೆಯ ಗೋದಾಮುಗಳಲ್ಲಿ ಸಾಗಾಣಿಕೆ ಮಾಡಿ ದಾಸ್ತಾನು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಾದ್ಯಂತೆ ಒಟ್ಟು 31 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ವಿಜಯಪುರ ತಾಲೂಕಿನ ವಿಜಯಪುರ ಟಿಎಪಿಸಿಎಂಸ್, ಹಿಟ್ನಳ್ಳಿ ಹಾಗೂ ಹೊನ್ನುಟಗಿ ಪಿಎಸಿಎಸ್, ಬಬಲೇಶ್ವರ ತಾಲೂಕಿನ ನಿಡೋಣ-1, ನಿಡೋಣಿ-2 ಹಾಗೂ ಸಾರವಾಡ ಪಿಎಸಿಎಸ್ಗಳಲ್ಲಿ, ತಿಕೋಟಾ ತಾಲೂಕಿನ ಬಾಬಾನಗರ, ತಿಕೋಟಾ ಪಿಎಸಿಎಸ್ಗಳಲ್ಲಿ, ಬಸವನಬಾಗೇವಾಡಿ ತಾಲೂಕಿನ ಬಸವನಬಾಗೇವಾಡಿ, ಟಿಎಪಿಸಿಎಂಎಸ್ ಮತ್ತು ಕೆ.ಸಾಲವಾಡಗಿ, ಉಕ್ಕಲಿ, ವಡವಡಗಿ ಹಾಗೂ ಇಂಗಳೇಶ್ವರ ಪಿಎಸಿಎಸ್ಗಳಲ್ಲಿ, ದೇವರಹಿಪ್ಪರಗಿ ತಾಲೂಕಿನ ದೇವರ ಹಿಪ್ಪರಗಿ (ಹೊಸೂರ), ಬೈರವಾಡ, ಯಾಳವಾರ ಪಿಎಸಿಎಸ್ಗಳಲ್ಲಿ, ತಾಳಿಕೋಟೆ ತಾಲೂಕಿನ ತಾಳಿಕೋಟೆ ಟಿಎಪಿಸಿಎಂಎಸ್ ಹಾಗೂ ಸಾಸನೂರ, ಬಿಂಜಲಬಾವಿ, ತಮದಡ್ಡಿ ಪಿಎಸಿಎಸ್ಗಳಲ್ಲಿ, ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಟಿಎಪಿಸಿಎಂಎಸ್ ಮತ್ತು ಬಿದರಕುಂದಿ, ಮಲಗಲದಿನ್ನಿ ಹಾಗೂ ಹುನಕುಂಟಿ ಪಿಎಸಿಎಸ್ಗಳಲ್ಲಿ, ಸಿಂದಗಿ ತಾಲೂಕಿನ ಸಿಂದಗಿ, ಓತಿಹಾಳ ಪಿಎಸಿಎಸ್ಗಳಲ್ಲಿ, ಇಂಡಿ ತಾಲೂಕಿನ ಇಂಡಿ ಟಿಎಪಿಸಿಎಂಎಸ್ ಮತ್ತು ಅಥರ್ಗಾ, ಖೇಡಗಿ ಪಿಎಸಿಎಸ್ಗಳಲ್ಲಿ, ಹಾಗೂ ಚಡಚಣ ತಾಲೂಕಿನ ಚಡಚಣ ಟಿಎಪಿಸಿಎಂ ಮತ್ತು ನೀವರಗಿ ಪಿಎಸಿಎಸ್ನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ.
ನ್ಯಾಪೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಮತ್ತು ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ನಿಯಮಿತ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಗಳನ್ನಾಗಿ ನೇಮಿಸಲಾಗಿದೆ.
ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಆಯ್.ಎಸ್.ಅವರಂಗಬಾದ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸೇರಿದಂತೆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು, ಕೆಎಸ್ಸಿಎಂಐಎಫ್ ಶಾಖಾ ವ್ಯವಸ್ಥಾಪಕರು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.