ವಿಜಯಪುರ: ಬಸವಣ್ಣನವರ ಸಂದೇಶ ಸಾರುವ ವಚನಗಳು ಶಿಲಾಶಾಸನಗಳಲ್ಲಿ ಅರಳಿರುವುದು ಅದ್ಭುತ ಕಾರ್ಯವಾಗಿದೆ ಎಂದು ರಾಜ್ಯಪಾಲ ಥಾವರಚಂದ ಗೆಹ್ಲೋಟ ಹೇಳಿದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ನಡೆದ ಭವ್ಯ ಶ್ರೀ ಬಸವೇಶ್ವರ ವಚನ ಶಿಲಾಮಂಟಪ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಸಾಮಾಜಿಕ ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿರುವ ಅಣ್ಣ ಬಸವಣ್ಣನವರ ವಿಚಾರಧಾರೆಯ ಬೆಳಕನ್ನು ನಮ್ಮ ಶ್ರೇಷ್ಠ ಸಂವಿಧಾನದಲ್ಲಿ ಕಾಣಬಹದುದಾಗಿದೆ ಎಂದರು.
ಅಣ್ಣ ಬಸವಣ್ಣನವರ ಕಾಲಘಟ್ಟ ೧೨ ನೇ ಶತಮಾನದಲ್ಲಿ ಪರಿಸ್ಥಿತಿ ಕಠಿಣವಾಗಿತ್ತು. ಆಗ ಬಸವಣ್ಣನವರು ಸಮಾನತೆಯ ಸಂದೇಶ ಸಾರಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದರು , ಈ ವೇಳೆ ಅವರು ಪಟ್ಟ ಪ್ರಯಾಸ ಅಷ್ಟಿಷ್ಟಲ್ಲ. ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದರು.
ಈ ವೇಳೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಎಚ್.ಡಿ ಆನಂದಕುಮಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.