ವಿಜಯಪುರ: ಚೀನಾದಲ್ಲಿ ಮತ್ತೆ ಕೋವಿಡ್ ವೈರಸ್ ಉಲ್ಬಣ ಹಿನ್ನೆಲೆ ನಿಂಬೆಕಣಜ ಎಂದು ಕರೆಯುವ ವಿಜಯಪುರ ಜಿಲ್ಲೆಯಲ್ಲಿ ಒಂದು ಮೂಟೆ ಲಿಂಬೆ ಹಣ್ಣಿಗೆ 4 ರಿಂದ 5ಸಾವಿರ ಬೆಲೆ ಮಾರಾಟವಾಗುತ್ತಿತ್ತು. ಇಂದು ಕೇವಲ 300 ರಿಂದ 400 ರೂಪಾಯಿ ಬೆಲೆಗೆ ಬಂದು ನಿಂತಿದೆ. ಖರೀದಿದಾರರು ಹಾಗೂ ಮದ್ಯವರ್ತಿಗಳ ನಡುವೆ ಸಿಲುಕಿರುವ ನಿಂಬೆ ಬೆಳೆಗಾರ ಅಕ್ಷರಸ್ತಾ ಸಂಕಷ್ಟದಲ್ಲಿ ಸಿಲುಕಿದ್ದಾನೆ.
ಪ್ರತಿವರ್ಷ ಚಳಿಗಾಲದಲ್ಲಿಯೂ ನಿಂಬೆ ರೈತರ ಕೈ ಹಿಡಿಯುತ್ತಿತ್ತು. ಆದರೆ ಈ ಬಾರಿ ಮಾತ್ರ ನಿಜವಾಗಲೂ ನಿಂಬೆ ರೈತರಿಗೆ ಹುಳಿ ಜತೆ ಕಹಿ ಸಹ ಉಣಬಡಿಸುತ್ತಿದೆ.
ಈ ಬಾರಿ ಜಿಲ್ಲೆಯಲ್ಲಿ 12.000 ಹೆಕ್ಟರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗಿದೆ. ಉತ್ತಮ ಮಳೆಯಿಂದ ಭೂಮಿ ಫಲವತ್ತಾಗಿರುವ ಕಾರಣ ನಿಂಬೆ ಬಂಪರ್ ಬೆಳೆ ಬಂದಿದೆ. ಅಂತೂ ತಾವು ಮಾಡಿದ ಸಾಲ ಈ ಬಾರಿ ತೀರಿಸಿ ಸ್ವಲ್ಪ ಕಾಸು ಕೂಡಿಬೇಕು ಎಂದು ಲೆಕ್ಕಾಚಾರ ಹಾಕಿದ್ದ ನಿಂಬೆ ಬೆಳೆಗಾರ ಎಪಿಎಂಸಿ ಮಾರುಕಟ್ಟೆ ಯಲ್ಲಿ ನಿಂಬೆ ಮಾರಾಟಕ್ಕೆ ಹೋದಾಗ ಅಲ್ಲಿಯ ವಾಸ್ತವೇ ಬೇರೆಯಾಗಿದೆ. ದೂರದ ಗ್ರಾಮಗಳಿಂದ ವಾಹನ ಮೂಲಕ ನಿಂಬೆ ತರಲು ನಿಂಬೆ ಕಟಾವು, ವಾಹನಕ್ಕೆ ಮೂಟೆ ಹಾಕುವದು, ವಾಹನ ಬೆಲೆ ಜತೆಗೆ ಎಪಿಎಂಸಿಗೆ ಬಂದ ಮೇಲೆ ಕೆಳಗೆ ಇಳಿಸಲು ಒಂದು ಮೂಟೆಗೆ 10ರೂ. ಕೂಲಿ ಸೇರಿದಾಗ ಬಂದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಇಲ್ಲಿಯೇ ಖರ್ಚು ಆಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ನಿಂಬೆ ಬೆಳೆಯಲಾಗಿದೆ. ಚಳಿಗಾಲ ಇರುವ ಕಾರಣ ಸಹಜವಾಗಿ ಬೇಡಿಕೆ ಕಡಿಮೆ ಇರುತ್ತದೆ. ಅದರ ಜತೆ ಮದ್ಯವರ್ತಿಗಳ ಹಾವಳಿ ಬೇರೆ ಇವೆಲ್ಲದರ ನಡುವೆ ನಿಂಬೆ ಬೆಳೆಗಾರ ಬಸವಳಿದಿದ್ದಾನೆ. ಸರ್ಕಾರ ನಿಂಬೆ ಅಭಿವೃದ್ಧಿ ಮಂಡಳಿಗೆ ಚೇತರಿಕೆ ನೀಡಿ ಹೆಚ್ಚು ಕೋಲ್ಡ್ ಸ್ಟೋರೇಜ್ ಸ್ಥಾಪಿಸಿದರೆ ನಿಂಬೆ ಬೆಳೆಗಾರ ಬದುಕಬಹುದು ಎಂದು ರೈತರು ಹೇಳಿದ್ದಾರೆ.