ವಿಜಯಪುರ: ಹಳ್ಳಿ ಮಕ್ಕಳು ಸೇರಿದಂತೆ ಸಣ್ಣ ಪುಟ್ಟ ನಗರಗಳ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೂರದ ಬೆಂಗಳೂರಿನಿಂದ ಬಂದು ಈ ನೂತನ ಬ್ಲೂರೋಸ್ ಟೆಕ್ನಾಲಜಿ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಜಿಲ್ಲೆಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಿ ಹೇಳಿದರು.
ವಿಜಯಪುರ ನಗರದ ಸೋಲಾಪುರ ರಸ್ತೆಯ ಶಶಿನಾಗ ಹೋಟೆಲ್ ಹಿಂಭಾಗದಲ್ಲಿರುವ ರೂಪಾದೇವಿ ಸಿಬಿಎಸ್ಇ ಸ್ಕೂಲ್ನಲ್ಲಿ ಬ್ಲೂ ರೇಸ್ ಟೆಕ್ನಾಲಜಿ ಬೆಂಗಳೂರು ಇವರ ಆಶ್ರಯದಲ್ಲಿ ಹಮ್ಮಿಕೊಂಡ ಇ-ಟೆಕ್ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಇ-ಟೆಕ್ ಇಂಡಿಯಾ ಆನ್ಲೈನ್ ಕ್ಲಾಸ್ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ
ಉತ್ಕೃಷ್ಟ-ಗುಣಮಟ್ಟದ ಶಿಕ್ಷಣ ಒದಗಿಸುವ ತಂತ್ರಜ್ಞಾನವಾಗಿದ್ದು, 8ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಗಣಿತ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕರ್ನಾಟಕ ಮಾಧ್ಯಮಿಕ ಶಿಕ್ಷಣದ ಪಠ್ಯಕ್ರಮದಂತೆ ಆನ್ಲೈನ್ ಮೂಲಕ ದಿನದ ಯಾವುದೇ ವೇಳೆಯಲ್ಲಿಯೂ ಸಹ ವಿದ್ಯಾರ್ಥಿಗಳು etechindia.com
(ಇಟೆಕ್ಇಂಡಿಯಾ.ಕಾಂ) ನಲ್ಲಿ ನೋಂದಾಯಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಈ ಆನ್ಲೈನ್ ತಂತ್ರಜ್ಞಾನದಲ್ಲಿ ಚರ್ಚಾಕೂಟಳು, ರಸಪ್ರಶ್ನೆಗಳು ಜರುಗುವುದರಿಂದ ಇದರಲ್ಲಿಯೂ ಸಹ ಮಕ್ಕಳು
ಭಾಗವಹಿಸಬಹುದಾಗಿದೆ. ಒಟ್ಟಾರೆ ಈ ತಂತ್ರಜ್ಞಾನದಿಂದ ಅತ್ಯಂತ ಕಡಿಮೆ ಮಾಸಿಕ ದರದಲ್ಲಿ ಬಡ ವಿದ್ಯಾರ್ಥಿಗಳು ಗುಣಮಟ್ಟದ ಪಡೆಯುವಂತಾಗಲಿ ಎಂಬ ಸದುದ್ದೇಶದಿಂದ ಅಭಿವೃದ್ಧಿಪಡಿಸಲಾಗಿದ್ದು, ಜಿಲ್ಲೆಯ ಎಲ್ಲ ಮಕ್ಕಳು ಈ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಗರದ ರೂಪಾದೇವಿ ಸಿಬಿಎಸ್ಇ ಸ್ಕೂಲ್ &
ರೆಸಿಡೆನ್ಸಿಯಲ್ ಸಾಯಿನ್ಸ್ ಪಿಯು ಕಾಲೇಜ್ದೊಂದಿಗೆ ನೂತನ ತಂತ್ರಜ್ಞಾನ ಯೋಜನೆ ಅಭಿವೃದ್ಧಿಪಡಿಸಿ ಇಂದು ಈ ಯೋಜನೆಗೆ ಚಾಲನೆ ದೊರೆತಿದ್ದು, ಜಿಲ್ಲೆಯ ಬಡ ಜನರಿಗೆ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆದುಕೊಂಡು ಉನ್ನತಮಟ್ಟದ ಉತ್ಕೃಷ್ಟ ಶಿಕ್ಷಣ ಪಡೆದುಕೊಳ್ಳುವಂತೆ ಕರೆ ನೀಡಿದರು.
ಬ್ಲೂರೋಸ್ ಟೆಕ್ನಾಲಜಿ ಸಂಸ್ಥಾಪಕರಾದ ತುಳಸಿದಾಸಪ್ಪ ಅವರು ಮಾತನಾಡಿ, ನಾನು ಗ್ರಾಮೀಣ ಪ್ರದೇಶದವನಾಗಿದ್ದು, ಗ್ರಾಮೀಣ, ಬಡ ಜನರ ಮಕ್ಕಳಿಗೆ ಏನನ್ನಾದರೂ ಮಾಡಬೇಕೆಂಬ ಆಸೆಯಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ರಾಜ್ಯದ ಬೆಂಗಳೂರು, ಮುಂಬಯಿ ಸೇರಿದಂತೆ ಮಹಾನಗರಗಳಲ್ಲಿ ಹಲವು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ, ಸಣ್ಣ ಪುಟ್ಟ ನಗರಗಳ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜಯಪುರದ ರೂಪಾದೇವಿ ಸಿಬಿಎಸ್ಇ ಸ್ಕೂಲ್ದೊಂದಿಗೆ ಈ ತಂತ್ರಜ್ಞಾನವನ್ನು ಇಂದಿನಿಂದ ಆರಂಭಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮಕ್ಕಳಿಗೆ ಸಲಹೆ ನೀಡಿದರು.
ರೂಪಾದೇವಿ ಸಿಬಿಎಸ್ಇ ಸ್ಕೂಲ್ & ರೆಸಿಡೆನ್ಸಿಯಲ್ ಸಾಯಿನ್ಸ್ ಪಿಯು ಕಾಲೇಜ್ ಸಂಸ್ಥೆಯ ಚೇರಮನ್ರಾದ ನರಸಮ್ಮ ಗೊಟ್ಯಾಳ ಹಾಗೂ ಜಟ್ಟೆಪ್ಪ ಬೋಳೆಗಾಂವ, ಬಿ.ಆರ್.ಚವ್ಹಾಣ, ಭೀಮಸೇನ ಕೋಕರೆ, ರವೀಂದ್ರ ಲೋಣಿ, ಎಸ್.ವಿ.ಮಂಜುನಾಥ್, ಹೇಮಂತ, ಎಚ್.ಜಿ.ಮಿರ್ಜಿ ಬ್ಲೂರೋಸ್ ಸಂಸ್ಥೆ ಹಾಗೂ ಕಾಲೇಜ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜ್ನ ಹಿತಚಿಂಕರಾದ ಜಿ.ಕೆ.ಗೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.