ವಿಜಯಪುರ: ಕರ್ನಾಟಕ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ಭಾರತ ಚುನಾವಣಾ ಆಯೋಗವು ಚುನಾವಣೆ ಅಧಿಸೂಚನೆಯನ್ನು ಹೊರಡಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಅವರು ಹೇಳಿದರು.
ಮೇ 12ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 19ರಂದು ಅಧಿಸೂಚನೆ ಹೊರಡಿಸಲಾಗುವುದು. ಮೇ 26 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ. ಮೇ 27ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 30 ಕೊನೆಯ ದಿನವಾಗಿದೆ.
ಜೂನ್ 13ರಂದು ಮತದಾನವು ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಅದೇ ರೀತಿ ಜೂನ್ 15ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 17ರಂದು ಈ ಚುನಾವಣೆಯ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಅವರು ವಿವರಿಸಿದರು.
2016ರಲ್ಲಿನ ಚುನಾವಣೆಯಂತೆ 40 ಮತಗಟ್ಟೆಗಳು ಇರುತ್ತವೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
4094 ಪುರುಷರು ಹಾಗೂ 1418 ಮಹಿಳೆಯರು ಸೇರಿ 5512 ಶಿಕ್ಷಕ ಮತದಾರರು ಹಾಗೂ ಅದೇ 11,218 ಪುರುಷರು ಮತ್ತು 3626 ಮಹಿಳೆಯರು ಸೇರಿ 14,846 ಪದವೀಧರ ಮತದಾರರು ಈ ಚುನಾವಣೆಯಲ್ಲಿ ಮತ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯನ್ನು ಸುವ್ಯವಸ್ಥಿತವಾಗಿ ಜಾರಿ ಮಾಡಲು ತಲಾ 13 ಎಫ್ಎಸ್ಟಿ, ವಿವಿಟಿ, ವಿಎಸ್ಟಿ, ಎಂಸಿಸಿ ಸೇರಿದಂತೆ ವಿವಿಧ ತಂಡಗಳ ರಚನೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಚುನಾವಣೆಯ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ಅವರು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಇದ್ದರು.