ವಿಜಯಪುರ: ಕಲಿಕೆಗೆ ವಯಸ್ಸು ಎಂಬುದಿಲ್ಲ. ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿ ಕೊಟ್ಟಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ ಪರೀಕ್ಷೆಯಲ್ಲಿ *ಎಂ. ಎ. ಇಂಗ್ಲಿಷ್* ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಗಮನ ಸೆಳೆದಿದ್ದಾರೆ. ನಿಂಗಯ್ಯ ಒಡೆಯರ ಅವರ 5ನೇ ಸ್ನಾತಕೋತ್ತರ ಪರೀಕ್ಷೆ ಇದಾಗಿದ್ದು, ಅವರಲ್ಲಿ ಓದಿನ ಬಗ್ಗೆ ಇರುವ ಹಂಬಲ ಮತ್ತು ಇಚ್ಛಾಶಕ್ತಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವವರಿಗೆ ಮಾದರಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್. ಸಿ. ಹಳ್ಳಿಯವರು. ಸರಕಾರಿ ನೌಕರಿಯಲ್ಲಿದ್ದ ಇವರು ಸೇವಾ ನಿವೃತ್ತಿಯ ನಂತರ ಮತ್ತಷ್ಟು ಕಲಿಯಬೇಕು ಎಂಬ ಹಂಬಲದಿಂದ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ಇಗ್ನೋದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಇವರು ಪಡೆದಿದ್ದಾರೆ.
![](https://karnataka1news.com/wp-content/uploads/2023/06/IMG-20230609-WA0202-1024x576.jpg)