ವಿಜಯಪುರ: ರೈತರ ಬೆಳೆ ವಿಮೆ ಪರಿಹಾರ ಸರ್ಕಾರ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. ವಿಜಯಪುರ ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು. ಅಲ್ಲದೇ, ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡಬೇಕು. ಅದಕ್ಕಾಗಿ ಕನಿಷ್ಠ 4 ಸಾವಿರ ಕಬ್ಬಿನ ದರ ನಿಗದಿಗೊಳಿಸಬೇಕು. ಕಬ್ಬು ಬೆಳೆದ ರೈತರು ಒಂದಾಗಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು. ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಹೆಸರಿನಲ್ಲಿ ಮೋಸ ಮಾಡುವ ಆರೋಪಗಳು ಕೇಳಿ ಬಂದಿದೆ. ಅದಕ್ಕಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆದ್ರೇ, ಸಿಎಂ ಸಿದ್ದರಾಮಯ್ಯ ಕೃಷಿ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋವುಗಳು ರೈತರ ಬದುಕು. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಹಿಂದಕ್ಕೆ ಪಡೆದುಕೊಳ್ಳಬಾರದು. ಇದರಿಂದ ರೈತರ ಬದುಕು ನಾಶ ಆಗುತ್ತದೆ. ಗೋವುಗಳು ರೈತರ ಜೀವನಾಡಿ ಆಗಿದ್ದಾವೆ ಎಂದರು. ಗೋಹತ್ಯೆ ನಿಷೇಧವನ್ನು ತಿದ್ದುಪಡಿ ಮಾಡಬೇಕು. ಅದಕ್ಕಾಗಿ ವಯಸ್ಸಾದ ಗೋವುಗಳಿಗೆ ವೈದ್ಯಕೀಯ ಪತ್ರ ನೀಡಬೇಕು ಎಂದರು.