ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸುವ ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದಾಚರಣೆ ಮಂಗಳವಾರ ನಡೆಯಲಿದ್ದು, ಜಿಲ್ಲೆಯಾದ್ಯಂತ ಸಿದ್ಧತೆ ನಡೆದಿದೆ. ಹೌದು..! ನಾಳೆ ಮಣ್ಣೆತ್ತಿನ ಅಮವಾಸ್ಯೆ ಮಣ್ಣಿನಿಂದ ಮಾಡಿದ ಎತ್ತುಗಳ ಜೋಡಿಗೆ ಪೂಜೆ ಮಾಡುವುದು ಈ ಹಬ್ಬದ ವಿಶೇಷವಾಗಿದೆ. ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ಉತ್ತರ ಕರ್ನಾಟಕ ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸ್ಯೆ ಎಂದರೆ ಎಲ್ಲಿಲ್ಲದ ಹಿಗ್ಗು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಇತ್ತ ವಿಜಯಪುರ ನಗರ ನಿವಾಸಿಗಳಾದ ಕಾಳೆ ಹಾಗೂ ಕಾಸುಂದೆ ಕುಟುಂಬಸ್ಥರು ತಲೆಮಾರುಗಳಿಂದ ಮಣ್ಣಿನ ಮೂರ್ತಿ ತಯಾರಿಸುತ್ತಿದ್ದಾರೆ. ನಗರದ ಜನತೆ ಮಣ್ಣಿನಿಂದ ತಯಾರಿಸಲಾದ ಜೋಡೆತ್ತುಗಳ ಮೂರ್ತಿಯನ್ನು ಮನೆಯ ದೇವರ ಜಗಲಿಯ ಮೇಲೆ ಪ್ರತಿಷ್ಠಾಪನೆ ಮಾಡಿ, ಪೂಜಿಸಿ ಪ್ರಾರ್ಥಿಸುತ್ತಾರೆ. ಇನ್ನು ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳೆಲ್ಲರೂ ಸೇರಿ ಚಿಕ್ಕದೊಂದು ಬುಟ್ಟಿಯಲ್ಲಿ ಮಣ್ಣಿನ ಎತ್ತುಗಳನ್ನು ಹಿಡಿದುಕೊಂಡು ಗ್ರಾಮದಲ್ಲಿನ ಮನೆ ಮನೆಗೆ ಹೋಗಿ ಆರತಿ ಮಾಡಿಸಿಕೊಳ್ಳುವ ಸಂಪ್ರದಾಯೂ ಇದೆ. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಜೋಡೆತ್ತಿಗೆ ಆರತಿ ಮಾಡಿ ದವಸ, ಧಾನ್ಯಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿದೆ. ಇನ್ನು ಕೊರೊನಾ ಸಮಯದಲ್ಲಿ ಸಪ್ಪೆಯಾಗಿದ್ದ ವ್ಯಾಪಾರ ಈ ಬಾರಿ ಜೋರು ಪಡೆದಿದೆ. ಈ ಬಾರಿ ಚಿಕ್ಕ ಎತ್ತುಗಳ ಮೂರ್ತಿ 50 ರಿಂದ 1000 ರೂಪಾಯಿಯವರೆಗೆ ಮಾರಾಟವಾಗುತ್ತಿವೆ. ಈ ಬಾರಿ ಪಿಓಪಿ ಎತ್ತಿನ ಮೂರ್ತಿಗಳಿಗೆ ಬೇಡಿಕೆ ಇದೆ. ರೈತರ ಹಬ್ಬ ಎನಿಸಿದ ಮಣ್ಣೆತ್ತಿನ ಅಮವಾಸೆ ಹಬ್ಬದಾಚರಣೆಗೆ ರೈತ ಕುಟುಂಬಗಳು ಸಜ್ಜಾಗಿದ್ದು, ರೈತರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.