ಮೃತಪಟ್ಟ ಯುವಕನ ಸಹೋದರಿಗೆ ಸಿದ್ದಸಿರಿ ಸೌಹಾರ್ದದಲ್ಲಿ ನೌಕರಿ, ಗಾಯಾಳುವಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ
ವಿಜಯಪುರ: ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಈಚೆಗೆ ವಿದ್ಯುತ್ ಸ್ಪರ್ಶದಿಂದ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಡೋಬಳೆ ಗಲ್ಲಿಯ ಯುವಕ ಶುಭಂ ಸಂಕಪಾಲ ಅವರ ಮನೆಗೆ ಹಾಗೂ ಗಾಯಗೊಂಡ ಯುವಕರ ಮನೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಯತ್ನಾಳ, ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಸ್ಪರ್ಶದಿಂದ ದುರ್ಘಟನೆ ನಡೆದಿರುವುದು ಅತ್ಯಂತ ನೋವಿನ ವಿಷಯ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಮನೆಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಮೃತ ಯುವಕನ ಸಹೋದರಿ ಮೋನಿಕಾ ಸಂಕಪಾಲ ಬಿಕಾಂ ಪದವಿದರೆ ಆಗಿದ್ದು, ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕಿರಿಯ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಂಡು, ಅವರ ಕುಟುಂಬದ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಗಾಯಗೊಂಡ ಪ್ರಭು ಬ್ಯಾಳಿ, ಲಕನ್ ಚವ್ಹಾಣ ಅವರಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಕುಟುಂಬದವರಿಗೆ ತಿಳಿಸಿ, ಆಂಬ್ಯುಲನ್ಸ್ ಮೂಲಕ ಆಸ್ಪತ್ರೆ ಕರೆದೊಯ್ಯಲು ಜೆ.ಎಸ್.ಎಸ್ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಕಿರಣ ಪಾಟೀಲ, ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ವಿಜಯಕುಮಾರ್ ಚವ್ಹಾಣ, ಮುಖಂಡರಾದ ಶಂಕರ ಹೂಗಾರ, ಚಂದ್ರು ಚೌದರಿ, ದತ್ತಾ ಗೋಲಂಡೆ ಅಲ್ಲದೆ ಅದೇ ಮರಾಠಾ ಸಮಾಜದ ಮುಖಂಡರು, ಯುವಕರು, ಕಾರ್ಯಕರ್ತರು ಉಪಸ್ಥಿತರಿದ್ದರು.