ವಿಜಯಪುರ: ಪ್ರೆಸ್ ಕಾರ್ಡ್ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ಗ್ಯಾಂಗ್ ಹೆಚ್ಚಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ವಿಜಯಪುರ ನಗರದ ಕಂದಗಲ್ ಹಣಮಂತರಾಯ್ ರಂಗಮಂದಿರದಲ್ಲಿ ಆಯೋಜಿಸಿದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಯೂಟ್ಯೂಬ್ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಮಾನ, ಮರ್ಯಾದೆ ಇಲ್ಲ ಎಂದು ಆರೋಪಿಸಿದರು. ಒಬ್ಬ ಪ್ರಬುದ್ಧ ರಾಜಕಾರಣಿ ಆಗಲು 25, 30 ವರ್ಷ ಬೇಕು. ಮಾಧ್ಯಮದವರು ಏಕಾಏಕಿ ರಾಜಕಾರಣಿಗಳ ತೇಜೋವಧೆ ಮಾಡಬೇಡಿ. ವಿಶ್ವಾಸಾರ್ಹತೆ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.