ವಿಜಯಪುರ: ಪತ್ನಿ ನೋಡಲು ಚೆನ್ನಾಗಿ ಇಲ್ಲವೆಂದು ಆಕೆಯ ಕೊಲೆ ಮಾಡಿದ ಪತಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ದಂಡ ವಿಧಿಸಿ ಆದೇಶ ನೀಡಿದೆ. ವಿಜಯಪುರ ಜಿಲ್ಲೆಯ ಕಾತ್ರಾಳ ಗ್ರಾಮದ ನಿವಾಸಿ ಮಾಳಪ್ಪ ಶಿವಪ್ಪ ಚಿನಗಂಡಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ. ಇತನ ಪತ್ನಿ ಸಾವಿತ್ರಿ ಚಿನಗಂಡಿ ಪತಿಯಿಂದ ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಮೃತ ಸಾವಿತ್ರ ಪದೇ ಪದೇ ಪತಿ ಮಾಳಪ್ಪನ ಮೇಲೆ ಸಂಶಯಗೊಂಡು ಜಗಳವಾಡುತ್ತಿದ್ದಳು. ಇದರಿಂದ ರೋಷಿ ಹೋಗಿದ್ದ ಮಾಳಪ್ಪ ಸಹ ನೀನು ಸರಿಯಿಲ್ಲ, ಸರಿಯಾಗಿ ಕೆಲಸ ಮಾಡುವುದಿಲ್ಲ. ನೀನು ನೋಡಲು ಚಂದವಿಲ್ಲವೆಂದು 2015ರ ಮಾರ್ಚ್ 9ರಂದು ಮಾಳಪ್ಪ ಪತ್ನಿ ಸಾವಿತ್ರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಕಾತ್ರಾಳ ಕೆರೆಯ ಒಡ್ಡಿನ ಮೇಲೆ ಬೈಕ್ ನಿಲ್ಲಿಸಿ ಕಲ್ಲಿನಿಂದ ಹಲ್ಲೆಗೈದು ಕೊಲೆ ಮಾಡಿದ್ದಾನೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಅಂದಿನ ಸಿಪಿಐ ಆರ್. ಎಸ್.ಚೌಧರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ, ಆರೋಪಿ ಮಾಳಪ್ಪ ಚನಗಂಡಿಗೆ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅದರಲ್ಲಿ 75ಸಾವಿರ ರೂ. ಮೃತಳ ವಾರಸುದಾರರಿಗೆ ಹಾಗೂ 25ಸಾವಿರ ರೂ. ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ತುಂಬುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.