ವಿಜಯಪುರ: ಪತ್ನಿಯ ಶೀಲ ಶಂಕಿಸಿ ಕೊಲೆ(Murder) ಮಾಡಿದ ಪತಿಗೆ ವಿಜಯಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Court) ಜೀವಾವಧಿ ಶಿಕ್ಷೆ ಹಾಗೂ1 ಲಕ್ಷ(Money) ರೂ. ದಂಡ ವಿಧಿಸಿ ತೀರ್ಪು ನೀಡಿದೆ. ತಾಲೂಕಿನ ತೊಣಶ್ಯಾಳ ಗ್ರಾಮದ ಮಹಾದೇವ ಗಂಗಪ್ಪ ಹೊಸಮನಿ ಶಿಕ್ಷೆಗೊಳಗಾದ ಆರೋಪಿ. ಈತ ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು, ಆಕೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಇದೇ ಕಾರಣಕ್ಕಾಗಿ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಆದಾಗ್ಯೂ ಸಂಶಯ ಪಿಶಾಚಿಗೆ ಮಾರು ಹೋದ ಆರೋಪಿ, 2017ರ ನವೆಂಬರ್ 19 ರಂದು ಪತ್ನಿಯನ್ನು ಕೊಲೆ ಮಾಡುವ ದುರುದ್ದೇಶದಿಂದ ಆಕೆಯೊಂದಿಗೆ ಜಗಳಕ್ಕಿಳಿದು, ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬುದರ ಕುರಿತು ಆಗಿನ ವಿಜಯಪುರ ಗ್ರಾಮಾಂತರ ಠಾಣೆ ಸಿಪಿಐ ಶಂಕರಗೌಡ ಬಸನಗೌಡರ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ದಬೇರ ಅವರು, ಸಾಕ್ಷಿಗಳನ್ನು ಅವಲೋಕಿಸಿ, ಆರೋಪಿಯ ಕೃತ್ಯ ಸಾಬೀತಾಗಿದೆ ಎಂದು ತೀರ್ಮಾನಿಸಿ, ಈ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ವಿ.ಜಿ. ಮಾಮನಿ ಅಭಿಯೋಗದ ಪರ ವಾದ ಮಂಡಿಸಿದ್ದರು.