ವಿಜಯಪುರ: ಪತ್ನಿ ಕೊಂದ ಪತಿಗೆ ವಿಜಯಪುರ ಜಿಲ್ಲಾ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಮೂಲತಃ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಹಾಗೂ ಹಾಲಿ ತೆಲಗಿ ನಿವಾಸಿ ಧರೆಪ್ಪ ಭೀಮಪ್ಪ ಸೀತಿಮನಿ ಶಿಕ್ಷೆಗೊಳಗಾದವ. ತನ್ನ ಪತ್ನಿ ಕವಿತಾಳ ನಡತೆಯ ಮೇಲೆ ಅನುಮಾನ ಪಟ್ಟು 2018 ಜುಲೈ 25 ರಂದು ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಕೊಲ್ಹಾರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಧ್ವೇಶ ದಬೇರ ಅವರು, ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆ ಪರಿಶೀಲಿಸಿ, ಆರೋಪಿ ಮೇಲಿನ ಆಪಾದನೆ ರುಜುವಾತಾಗಿದೆ ಎಂದು ತೀರ್ಮಾನಿಸಿ, ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಮೃತಳ ಮೂವರು ಮಕ್ಕಳಿಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.