ವಿಜಯಪುರ: ನಗರದ ರೈಲು ನಿಲ್ದಾಣಕ್ಕೆ ಇಂದು ಸಂಸದರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ರೈಲು ನಿಲ್ದಾಣ ನಿರ್ಮಾಣವಾಗುತ್ತಿದ್ದು, ಪ್ರಥಮ ಹಂತದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನೆಲಮಹಡಿಯಲ್ಲಿ ಕಚೇರಿಗಳು ಹಾಗೂ ಎರಡನೇ ಮಹಡಿಯಲ್ಲಿ ಫುಡ್ ಪ್ಲಾಜಾ ಹಾಗೂ ಇಲಾಖೆಯ ಸಿಬ್ಬಂದಿಗಳ ಕೊಠಡಿಗಳ ನಿರ್ಮಾಣ ಕಾರ್ಯ ನಡೆದಿದ್ದು, ಮಾರ್ಚ್ ಮಾಹೆಯಲ್ಲಿ ಪೂರ್ಣಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.
ರೈಲು ನಿಲ್ದಾಣ ಕಾಮಗಾರಿಯನ್ನು ವೇಗವಾಗಿ ಕೈಗೊಳ್ಳುವಂತೆ ಹುಬ್ಬಳಿ ಪ್ರಧಾನ ವ್ಯವಸ್ಥಾಪಕರಿಗೆ ಮಾತನಾಡಿದ್ದು, ಅವರು ಕೂಡ ಕೆಲಸವನ್ನು ತೀವ್ರವಾಗಿ ನಡೆಸಲು ಭರವಸೆ ನೀಡಿದ್ದಾರೆ. 2ನೇ ಹಂತದ ಕಾಮಗಾರಿಯನ್ನು ಈ ಕಟ್ಟಡ ಪೂರ್ಣಗೊಂಡ ನಂತರ ಕೈಗೊಳ್ಳಲು ಸೂಚಿಸಲಾಗಿದೆ. ಇಲ್ಲಿಯ ಗೂಡ್ಸ್ ಶೆಡ್ಗಳನ್ನು 18 ಕೋಟಿ ರೂ. ವೆಚ್ಚದಲ್ಲಿ ಅಲಿಯಾಬಾದನಲ್ಲಿ ಹೊಸ ಗೂಡ್ಸಶೆಡ್ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸಲಾಗುವುದು. ಈಗ ಜೋಡಿ ಲೈನ್ ರೈಲ್ವೆಟ್ರ್ಯಾಕ್ ಇದ್ದು ಮುಂದಿನ ದಿನಗಳಲ್ಲಿ 6 ಟ್ರ್ಯಾಕ್ಗೆ ಬದಲಾಯಿಸುವ ಕಾರ್ಯ ಕೈಗೊಳ್ಳಲಾಗುವುದು. ಈ ಕುರಿತು ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತರಲಾಗುವುದು. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ವಿಜಯಪುರದಿಂದ ತಿರುಪತಿ ರೈಲು ಹಾಗೂ ವಾರದ ದೆಹಲಿ ರೈಲನ್ನು ಪ್ರತಿದಿನ ವಿಸ್ತರಣೆಗೆ ಕೇಂದ್ರ ರೈಲ್ವೆ ಸಚಿವರನ್ನು ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಗಡಿ ಮುರಂನಿಂದ ವಿಜಯಪುರವರೆಗೆ 106 ಕಿ.ಮೀ. 998 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದಿಂದ ತೆಲಸಂಗ ಕ್ರಾಸ್ವರೆಗೆ 250 ಕೋಟಿ ರೂ. ವೆಚ್ಚದ 40 ಕಿ.ಮೀ. ದ್ವಿಪಥ ರಸ್ತೆಯ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದ್ದು, ವಿಜಯಪುರದಿಂದ ಕೊರ್ತಿ ಕ್ರಾಸ್ವರೆಗೆ (ಕೋಲಾರ)56 ಕಿ.ಮೀ. ವ್ಯಾಪ್ತಿಯ 291 ಕೋಟಿ ರೂ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಪಡಿಸಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಗಡಿಯ ಸಿದ್ದಾಪುರ-ಅರಕೇರಿ ನಗರಕ್ಕೆ ಕೂಡುವ ರಸ್ತೆಯ ಅಭಿವೃದ್ದಿಗಾಗಿ 90 ಕೋಟಿ ರೂ. ಅನುಮೊದನೆ ದೊರೆತಿದ್ದು, ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿ ಶೀಘ್ರದಲ್ಲಿ ಆರಂಭಿಸಿ, ಒಂದೂವರೆ ವರ್ಷ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಕನಮಡಿ-ಬಿಜ್ಜರಗಿ-ಬಾಬಾನಗರ ತಿಕೋಟಾ ಸೇರುವ 23.60 ಕಿ.ಮೀ. 196 ಕೋಟಿ ರೂ. ವೆಚ್ಚದ ರಸ್ತೆ ಮಂಜೂರಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು, ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ರಸ್ತೆ ನಿಧಿಯೋಜನೆಯಡಿ 14 ಕಾಮಗಾರಿಗಳು ಮಂಜೂರಾಗಿದ್ದು, 10 ಕಾಮಗಾರಿಗಳು ಪೂರ್ಣಗೊಂಡಿದ್ದು, 2 ಸೇತುವೆ ಕಾಮಗಾರಿಗಳು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಅಭಿಯಂತರ ವಿಜಯಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿರೇಶ ಮಠ, ಇತರರು ಉಪಸ್ಥಿತರಿದ್ದರು.