ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಸತತ ಸೋಲಿನಿಂದಾಗಿ ಟಿಕೆಟ್ ಕೈತಪ್ಪುವ ವರದಿ ಹಿನ್ನೆಲೆಯಲ್ಲಿ ಹತಾಶರಾಗಿ ವಿಜುಗೌಡ ಪಾಟೀಲರು ಅಸಂಬದ್ಧ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂರು ಬಾರಿ (ಹ್ಯಾಟ್ರೀಕ್) ಸೋಲು ಅನುಭವಿಸಿರುವ ವಿಜುಗೌಡ ಪಾಟೀಲರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬುದನ್ನು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಇದರಿಂದಾಗಿ ಕಂಗೆಟ್ಟಿರುವ ಅವರು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಬಲೇಶ್ವರ ಕ್ಷೇತ್ರದ ಜನತೆ ಅದರಲ್ಲಿಯೂ ವಿಶೇಷವಾಗಿ ತಾಯಂದಿರು, ರೈತರು, ಯುವಕರು ಕಾಂಗ್ರೆಸ್ ಪಕ್ಷವನ್ನು ಮತ್ತು ಎಂ.ಬಿ.ಪಾಟೀಲರವರನ್ನು ಹೆಚ್ಚು-ಹೆಚ್ಚು ಬೆಂಬಲಿಸುತ್ತಿರುವುದು ಇವರ ಹತಾಶೆಗೆ ಇನ್ನೊಂದು ಕಾರಣವಾಗಿದೆ.
ಚುನಾವಣೆಗಾಗಿ ಸೀರೆ ಹಂಚಿದ್ದಾರೆ ಎಂದು ಆರೋಪ ಮಾಡಿದ್ದು, ಹಾಗಿದ್ದರೆ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಂಚಿದ್ದು ಚುನಾವಣೆಗಾಗಿಯೇ? ಅವರೇನು, ಮತದಾರರೇ? ಅಷ್ಟಕ್ಕೂ ಮನೆ ಮುರಿಯುವ ಮದ್ಯವನ್ನೇನೂ ಹಂಚಿಲ್ಲ. ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದು ವಿದ್ಯಾರಾಣಿ ಹರಿಹಾಯ್ದಿದ್ದಾರೆ. ಜಿಲ್ಲೆಯ ಹಲವು ಶಾಸಕರ ಭಾವಚಿತ್ರ ಬಳಸಿ ಹಿಟ್ಟಿನ ಗಿರಣಿಗಳನ್ನು ಸಬ್ಸಿಡಿಯಲ್ಲಿ ನೀಡುತ್ತೇವೆ ಎಂದು ವಂಚಿಸುವ ಜಾಲವೇ ಇದೆ. ಬಬಲೇಶ್ವರ ಕ್ಷೇತ್ರದ ಶಾಸಕರಿಗೂ ಮತ್ತು ಭಾವಚಿತ್ರ ಬಳಸಿ, ಹಂಚುತ್ತಿರುವ ಹಿಟ್ಟಿನ ಗಿರಣಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಹು ಹಿಂದೆಯೇ ಸ್ಪಷ್ಟಿಕರಣ ನೀಡಿದ್ದು, ಇವರಿಗೆ ತಿಳಿದಂತಿಲ್ಲ.
ಕಾಂಗ್ರೆಸ್ ಪಕ್ಷ ಈ ವರ್ಷ ಪ್ರಣಾಳಿಕೆಯಲ್ಲಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದು ಹಾಗೂ ಗೃಹ ಲಕ್ಷ್ಮೀ ಯೋಜನೆಯಲ್ಲಿ ರೂ. 2000 ಸಹಾಯ ಧನ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಣೆ ಮಾಡಿದ್ದು, ಇದರಿಂದ ಹೆಚ್ಚಿನ ಮಹಿಳೆಯರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಬಬಲೇಶ್ವರದಲ್ಲಿ ದಿ.23 ರಂದು ಗುರುವಾರ ಮ.2 ಗಂ. ನಡೆಯಲಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೊಳಿಸಲಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ತಿಳಿಸಿದ್ದಾರೆ.