ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ ಎಂದು ವಾಯುವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಆರೋಪಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಪಾಸಿಂಗ್ ಇರುವ ಕಾರಿನಲ್ಲಿ ಹತ್ತು ಸಾವಿರದಂತೆ ಪ್ಯಾಕೇಟ್ ನಲ್ಲಿ ಹಣವಿಟ್ಟು ಹಂಚಲಾಗುತ್ತಿತ್ತು. ಇದೊಂದೆ ವಾಹನ ಅಲ್ಲದೆ ಇನ್ನೂ ಹದಿನಾಲ್ಕು ಕಾರುಗಳು ಹೀಗೆ ಓಡಾಡುತ್ತಿವೆ. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುವ ಕೆಲಸ ಮಾಡ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಇದೆಲ್ಲವನ್ನೂ ತಪಾಸಣೆ ಮಾಡಿ, ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಅಕ್ರಮವಾಗಿ ಹಣ ಹಂಚುವ ಮೂಲಕ ಕಾಂಗ್ರೆಸ್ ಕೀಳುಮಟ್ಟಕ್ಕೆ ಇಳಿದಿದೆ ಎಂದು ಬಿಜೆಪಿ ಮುಖಂಡ ವಿಜಯ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಸೋಲಿನ ಭೀತಿ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಮಾಡುತ್ತಿದ್ದು ಖಂಡನೀಯ. ಲಕ್ಷ ಲಕ್ಷ ಹಣವನ್ನು ಮತದಾರರಿಗೆ ಹಂಚಿಕೆ ಮಾಡುತ್ತಿರುವ ಆರೋಪಿಗಳು ಕೇಳಿ ಬಂದಿವೆ. ಇದನ್ನು ಚುನಾವಣಾಧಿಕಾರಿ ಗಮನಹರಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.