ವಿಜಯಪುರ: ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),ವಿಜಯಪುರ ವತಿಯಿಂದ ಜಿಲ್ಲಾ ಪಂಚಾಯತಿಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಸಂಜೀವಿನಿ -ಕೆಎಸ್ಆರ್ಎಲ್ಪಿಎಸ್ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಡಿ.24ರವರೆಗೆ ಹಮ್ಮಿಕೊಂಡ 6 ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮಕ್ಕೆ ಜಿ.ಪಂ. ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ ಅವರು ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಡಾಕ್ ಸಂಸ್ಥೆಯಿಂದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಉದ್ಯಮದ ಆಯ್ಕೆ ಪ್ರಾರಂಭಿಸುವ ವಿಧಾನ, ಮಾರುಕಟ್ಟೆ ಸಮೀಕ್ಷೆ ,ಬ್ರ್ಯಾಂಡಿಂಗ್ ,ಲೇಬಲಿಂಗ್ಗಳ ಕುರಿತು ತರಬೇತಿ ನೀಡಲಿದ್ದು, ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಉತ್ತಮವಾಗಿ ತರಬೇತಿ ಪಡೆದು, ಅರಿತುಕೊಂಡು ಉದ್ಯಮಿದಾರರಾಗುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ.ಕುಂಬಾರ ಹಾಗೂ ಸಿಡಾಕ್ ಜಂಟಿ ನಿರ್ದೇಶಕರಾದ ಶ್ರೀಮತಿ ಎಸ್.ಬಿ.ಬಳ್ಳಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರಾದ ರಫೀಕ ಬಿಜಾಪುರ ಉಪಸ್ಥಿತರಿದ್ದರು.ಕು.ಸರಸ್ವತಿ ಖ್ಯಾತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯಶಸ್ವಿ ಉದ್ದಿಮೆದಾರರಾದ ಶ್ರೀಮತಿ ನಂದಾ ಕುಂಬಾರ ಇವರನ್ನು ಸನ್ಮಾನಿಸಲಾಯಿತು. 30 ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ತರಬೇತಿಯಲ್ಲಿ ಹಾಜರಿದ್ದರು.