ವಿಜಯಪುರ: ದೀಪಾವಳಿ ಹಬ್ಬದ ಹಿನ್ನೆಲೆ ಪಣತಿ ಮಾರಾಟ ಮಾಡುತ್ತಿದ್ದ ಮಹಿಳೆಯ ಮಕ್ಕಳಿಗೆ ಪೊಲೀಸನೋರ್ವ ದೀಪಾವಳಿ ಗಿಫ್ಟ್ ನೀಡಿರುವ ಘಟನೆ ವಿಜಯಪುರ ನಗರದ ಎಸ್ ಎಸ್ ರೋಡ್ನಲ್ಲಿ ನಡೆದಿದೆ. ದಿನವಿಡೀ ರಸ್ತೆ ಬದಿ ಕುಳಿತಿದ್ದರೂ ಪಣತಿ ವ್ಯಾಪಾರ ಆಗದ್ದನ್ನು ಕಂಡ ಸಂಚಾರಿ ಪೊಲೀಸ್ ಎಸ್ ಜಿ ಇಳಜೇರಿ ಮಹಿಳೆಯ ಇಬ್ಬರು ಮಕ್ಕಳಿಗೆ ಬಟ್ಟೆ ಉಡುಗೊರೆ ಕೊಟ್ಟಿದ್ದಾರೆ. ಸಧ್ಯ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇಳಜೇರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಮಾನವೀಯ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.