*ಶ್ರೀಶೈಲದಲ್ಲಿ ಶ್ರೀಶೈಲ ಜಗದ್ಗುರುಗಳಿಂದ ನಂದಿ ಕೂಗು ಪುಸ್ತಕ ಬಿಡುಗಡೆ*
ಶ್ರೀಶೈಲ ಮಹೋತ್ಸವದ ಅಂಗವಾಗಿ ಶ್ರೀಶೈಲದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಸವರಾಜ ಎನ್. ಬಿರಾದಾರ ಅವರು ಬರೆದ ‘ನಂದಿ ಕೂಗು’ ಪುಸ್ತಕವನ್ನು ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿ ಮಾತನಾಡಿದರು. ನಶಿಸುತ್ತಿರುವ ಜೋಡೆತ್ತಿನ ಕೃಷಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಂದಿ ಕೂಗು ಪುಸ್ತಕವನ್ನು ಬರೆದು ನಂದಿ ಕೂಗು ಅಭಿಯಾನ
ಪ್ರಾರಂಭಿಸಿರುವುದು ಶ್ಲಾಘನೀಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಜೋಡೆತ್ತಿನ ಕೃಷಿ ಪುನಶ್ಚೇತನ ಕೆಲಸಕ್ಕೆ ಶ್ರೀಶೈಲ ಪೀಠವು ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುವುದು ಎಂದರು.
ಕರಬಂಟನಾಳದ ಶ್ರೀ ಶಿವಕುಮಾರ ಸ್ವಾಮೀಜಿಯವರು ಮಾತನಾಡಿ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ ಜೋಡೆತ್ತಿನ ಕೃಷಿ ಪುನಶ್ಚೇತನ ಕಾರ್ಯದಲ್ಲಿ ಪ್ರತಿಯೊಬ್ಬರು ಭಾಗಿಯಾಗಬೇಕಾದ ಅವಶ್ಯಕತೆಯಿದೆ. ಜೋಡೆತ್ತಿನ ಕೃಷಿ ಉಳಿಸಿದರೆ ಮಾತ್ರ ಮಣ್ಣು, ನೀರು ಹಾಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ನಂದಿ ಕೂಗು ಪುಸ್ತಕದ ಲೇಖಕರಾದ ಬಸವರಾಜ ಬಿರಾದಾರ ಅವರು ಉಪನ್ಯಾಸ ನೀಡಿ ಮಾತನಾಡಿ, ಕಂಬಿ ಮಲ್ಲಯ್ಯನ ಪೂಜಾ ಸಂಸ್ಕೃತಿಯು ಗ್ರಾಮಗಳಲ್ಲಿರುವ ಜೋಡೆತ್ತಿನ ಕೃಷಿಕರ ಭಾವೈಕ್ಯದ ಸಂಕೇತವಾಗಿದೆ. ಹಾಗಾಗಿ, ಮಲ್ಲಯ್ಯನ ಭಕ್ತೃರು ನಂದಿ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಮುಂದಾಳತ್ವ ವಹಿಸಿಕೊಳ್ಳುವ ಅವಶ್ಯಕತೆಯಿದೆ. ಶ್ರೀಶೈಲ ಜಗದ್ಗುರುಗಳು ಶ್ರೀಶೈಲದಲ್ಲಿ ಸುಮಾರು 500 ಕಂಬಿಗಳನ್ನು ಇಟ್ಟು ಪೂಜೆ ಮಾಡಲು ಬೃಹತ್ ಕಂಬಿ ಮಂಟಪ ನಿರ್ಮಾಣ ಮಾಡಲು ಸಂಕಲ್ಪ ಮಾಡುವ ಮೂಲಕ ಭಾರತ ವಿಶ್ವ ಗುರು ಆಗುವುದಕ್ಕೆ ವೇದಿಕೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿ ಕಂಬ ಮಂಟಪ ನಿರ್ಮಾಣ ಮಾಡುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಹಾಪೂರಿನ ಶ್ರೀ ಶಿವಗೂರೇಶ್ವರ ಸ್ವಾಮೀಜಿಗಳು ಕಾರ್ಯಕ್ರಮ ನಿರೂಪಿಸಿದರು. ನಾಗಣಸೂರಿನ ಶ್ರೀ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿಗಳು, ನೂಲದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀಕ್ಷೇತ್ರ ಗಡ್ಡಿಯ ಸಂಗಮೇಶ್ವರ ಸ್ವಾಮೀಜಿಗಳು, ಪ್ರಗತಿಪರ ರೈತರಾದ ಬಳೂತಿಯ ನಂದಬಸಪ್ಪ ಸಂಗಪ್ಪ ಚೌದರಿ, ಸಿದ್ದನಾಥ ಗ್ರಾಮದ ಶಿವಾನಂದ ಅಂಗಡಿ ಹಾಗೂ ಇತರರು ಭಾಗವಹಿಸಿದ್ದರು.