ಹುಬ್ಬಳ್ಳಿ: ಪುನಾ ಬೆಂಗಳೂರು ರಸ್ತೆಯಲ್ಲಿ ಹೊರಟಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ವೇಳೆಯಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘಟನೆ ಸೋಮವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.
ಬೆಂಗಳೂರಿನಿಂದ ಅಥಣಿಗೆ ಹೊರಟಿದ್ದ ಖಾಸಗಿ ಬಸ್ ನಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾಗ, ಬಸ್ಸಿನ ಹಿಂಬದಿಯ ಚಕ್ರಕ್ಕೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮವಾಗಿ ಇಡಿ ಬಸ್ಸನ್ನೇ ಬೆಂಕಿ ಆವರಿಸಿಕೊಂಡಿದೆ. ತಕ್ಷಣವೇ ಬಸ್ ಚಾಲಕ ಬೆಂಕಿ ಹೊತ್ತಿರುವುದನ್ನು ಗಮನಿಸಿ, ಬಸ್ ನಿಲ್ಲಿಸಿ ಪ್ರಯಾಣಿಕರೆಲ್ಲರನ್ನು ಕೆಳಗಡೆ ಇಳಿಸಿದ್ದಾನೆ. ಅಷ್ಟೇ ಅಲ್ಲದೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೂ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.